ಉದಯವಾಹಿನಿ, ಮುದಗಲ್: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಬೇಡಿಕೆ ತಗ್ಗಿದೆ.ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿವೆ. ಪ್ರಸಕ್ತ ವರ್ಷ ವಿಜ್ಞಾನ ವಿಭಾಗದ ಪ್ರಥಮ ವರ್ಷಕ್ಕೆ ಇಲ್ಲಿಯವರಿಗೂ 6 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
6ವಿದ್ಯಾರ್ಥಿಗಳಿಗೆ 6 ಜನ ಉಪನ್ಯಾಸಕರಿದ್ದಾರೆ. ಕಲಾ ವಿಭಾಗದಲ್ಲಿಯೇ ಗರಿಷ್ಠ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಭಾರಿ ಕುಸಿತ ಕಂಡ ಹಿನ್ನೆಲೆಯಲ್ಲಿ ವಿಜ್ಞಾನ ವಿಭಾಗಕ್ಕೆ ಬೇಡಿಕೆ ತಗ್ಗಿದೆ. ಮುದಗಲ್ ಹೋಬಳಿಯ 12 ಸರ್ಕಾರಿ ಪ್ರೌಢ ಶಾಲೆಯಲ್ಲಿ 1,122 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 570 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 549 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಅರ್ಧದಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರಿಂದ ಇಲ್ಲಿನ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ವಿಜ್ಞಾನ ತರಗತಿಗೆ ವಿದ್ಯಾರ್ಥಿಗಳನ್ನು ಕರೆತರಲು ಉಪನ್ಯಾಸಕರು ಹೆಣಗಾಡುತ್ತಿದ್ದಾರೆ. ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯಲು ಇಚ್ಛಿಸುವ ಇಲ್ಲಿನ ವಿದ್ಯಾರ್ಥಿಗಳು ಲಿಂಗಸುಗೂರು, ಇಳಕಲ್, ಬಾಗಲಕೋಟೆ, ಧಾರವಾಡ, ದಾವಣಗೆರೆಯಂಥ ನಗರಗಳಿಗೆ ಹೋಗುತ್ತಿದ್ದಾರೆ.
