ಉದಯವಾಹಿನಿ, ವಿಜಯಪುರ: ಜಮೀನಿನಲ್ಲಿದ್ದ ನೀರು ತುಂಬಿದ್ದ ಆಳವಾದ ಗುಂಡಿಗೆ ಬಿದ್ದು ಮೂವರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿದೆ. ನೀಲಮ್ಮ ಖಿಲಾರಹಟ್ಟಿ (16), ಮುತ್ತಪ್ಪ ಖಿಲಾರಹಟ್ಟಿ ( 24 ) , ಶಿವು ಯಾಳವಾರ ( 25 ) ಮೃತರು. ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರಿಗೆ ಸೇರಿದ ಜಮೀನಿಗೆ ಎಮ್ಮೆ ಮೇಯಿಸಲು ನೀಲಮ್ಮ ಹೋಗಿದ್ದರು. ಎಮ್ಮೆಗೆ ನೀರು ಕುಡಿಸಲು ನೀರು ತುಂಬಿದ್ದ ಗುಂಡಿ ಬಳಿ ಬಂದಾಗ ಕಾಲು ಜಾರಿ ಬಿದ್ದಿದ್ದಾರೆ.
ಸಂಬಂಧಿಕರು ಸಾವು : ಇದನ್ನು ಕಂಡು ಆಕೆಯನ್ನು ರಕ್ಷಣೆ ಮಾಡಲು ಬಂದ ಸಂಬಂಧಿಕ ಮುತ್ತಪ್ಪ ಖಿಲಾರಹಟ್ಟಿ ಹಾಗೂ ಯುವತಿ ನೀರಿನಲ್ಲಿ ಹೊರ ಬರಲಾರದೇ ಪರದಾಟ ನಡೆಸಿದ್ದಾರೆ. ಇದನ್ನು ಕಂಡು ಕಾಪಾಡಲು ಬಂದ ಶಿವು ಯಾಳವಾರ ಸಹ ನೀರು ಪಾಲಾಗಿದ್ದಾನೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.
