ಉದಯವಾಹಿನಿ, ಬಳ್ಳಾರಿ: ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಾಳೆ ನಡೆಯಲಿದೆ. ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತ ಕೃಷ್ಣಾ ಬಾಜಪೇಯಿ ಅವರು ಚುನಾವಣೆ ನಡೆಸಿಕೊಡಲಿದ್ದಾರೆ. ನಾಮಪತ್ರಗಳನ್ನು ಎಡಿಸಿಯವರು ಪ್ರಾದೇಶಿಕ ಆಯುಕ್ತರ ಪರವಾಗಿ ನಾಮಪತ್ರ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 12 ವರೆಯಿಂದ ಸದಸ್ಯರ ಸಭೆ ನಡೆಸಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ.ಪಾಲಿಕೆಯ 39 ಸದಸ್ಯರು ಮತ್ತು ಗ್ರಾಮೀಣ, ನಗರದ ಶಾಸಕರು, ರಾಜ್ಯಸಭೆ ಮತ್ತು ಲೋಕಸಭಾ ಸದಸ್ಯರು, ಹಾಗು ಓರ್ವ ವಿಧಾನ ಪರಿಷತ್ ಸದಸ್ಯರು ಮತದಾನ ಮಾಡುವ ಅರ್ಹತೆ ಇದೆ. ಕಾಂಗ್ರೆಸ್ ಪಕ್ಷದ ಸ್ಪಷ್ಟ ಬಹುಮತ ಹೊಂದಿದೆ. 13 ಸದಸ್ಯ ಬಲದ ಬಿಜೆಪಿಯ ಸದಸ್ಯರೂ ಸಹ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ
ಮೇಯರ್ ಸ್ಥಾನ ಸಾಮಾನ್ಯ ಮತ್ತು ಉಪಮೇಯರ್ ಸ್ಥಾನ ಓಬಿಸಿ ಮಹಿಳೆಗೆ ಮೀಸಲಿದೆ.
ಯಾರನ್ನು ಈ ಸ್ಥಾನಗಳಿಗೆ ಆಯ್ಕೆ ಮಾಡಬೇಕು ಎಂಬ ಬಗ್ಗೆ ನಿನ್ನೆ ಸಂಜೆ ಅಲ್ಲಂ ಭವನದಲ್ಲಿ ಪಕ್ಷದ ವೀಕ್ಷರಾದ ಕೆಪಿಸಿಸಿ ಉಪಾಧ್ಯಕ್ಷರಾದ ಎಂ. ನಾರಾಯಣಸ್ವಾಮಿ ಮತ್ತು ಸೂರಜ್ ಎಂ.ಎನ್. ಹೆಗ್ಗಡೆ ಅವರು ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ಭರತ್ ರೆಡ್ಡಿ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮೊದಲಾದವರೊಂದಿಗೆ ಪಾಲಿಕೆ ಸದಸ್ಯರ ಸಭೆ ಸಾಮೂಹಿಕವಾಗಿ ನಡೆಸಿ ಆಕಾಂಕ್ಷಿಗಳಾರು ಎಂದು ಕೇಳಿದ್ದಾರೆ. ಪಿ.ಗಾದೆಪ್ಪ, ಮುಲ್ಲಂಗಿ ನಂದೀಶ್, ಎಂ.ಪ್ರಭಂಜನ್ ಕುಮಾರ್ ಮತ್ತು ಪೇರಂ ವಿವೇಕ್
ತಮಗೆ ಅವಕಾಶ ನೀಡಿ ಎಂದು ಕೇಳಿದ್ದಾರೆ. ನಂತರ ಸದಸ್ಯರ ಅಭಿಪ್ರಾಯವನ್ನು ಒನ್ ಟು ಒನ್ ಕೇಳಲಾಗಿದೆಯಂತೆ. ನಂತರ ಎಲ್ಲರೂ ಪಕ್ಷದ ವರಿಷ್ಟರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರಂತೆ. ಇಂದು ಮಧ್ಯಾಹ್ನ ಮತ್ತೆ ಅಲ್ಲಂ ಭವನದಲ್ಲಿ ಸಭೆ ಸೇರಿದ ವೀಕ್ಷಕರು, ಶಾಸಕರು, ಸಂಸದರು, ಮುಖಂಡರು ಚರ್ಚಿಸಿ ವರಿಷ್ಟರಿಗೆ ವರದಿ ಕಳಿಸಿದ್ದಾರಂತೆ. ಆಯ್ಕೆ ಚಂಡು ಈಗ ವರಿಷ್ಟರ ಅಂಗಳದಲ್ಲಿದೆ.
