ಉದಯವಾಹಿನಿ, ಪಾಂಡವಪುರ: ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ನೀರು ಒದಗಿಸಲಾಗುವುದು ರೈತರು ಆತಂಕಪಡುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿಯನ್ನು ವೀಕ್ಷಿಸಿ ಹಾಗೂ ಪರಿಶೀಲನೆ ನಡೆಸಿ ಮಾತನಾಡಿದರು.
ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ನಮ್ಮ ಸರ್ಕಾರ ನಡೆಸುತ್ತಿರುವ ಗುಣಮಟ್ಟ ಕಾಮಗಾರಿಯನ್ನು ನೋಡಿ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅಸಮಾಧಾನದಿಂದ ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಯಾವುದೇ ಕೆಲಸ ಆಗಬಾರದು, ರೈತರು ಇದೇ ಸ್ಥಿತಿಯಲ್ಲಿಯೇ ಇರಬೇಕು ಎಂಬ ಭಾವನೆ ಇದ್ದಂತಿದೆ. ನಾವು ಅವರ ರೀತಿಯ ರಾಜಕಾರಣ ಮಾಡಲು ಹೋಗಲ್ಲ. ನಮ್ಮ ಸರ್ಕಾರಕ್ಕೆ ರೈತರ ಹಿತ ಮುಖ್ಯ. ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸುವ ವಿಪಕ್ಷ ನಾಯಕರು ಯಾವ ಎಂಜಿನಿಯರ್ ಗಳನ್ನಾದರೂ ಕರೆದುಕೊಂಡು ಬಂದು ಗುಣಮಟ್ಟ ಪರೀಕ್ಷಿಸಲಿ. ನಾವು ಯಾರನ್ನು ತಡೆಯುವುದಿಲ್ಲ ಎಂದರು.
1992ರಲ್ಲಿ ಕೆ.ಎನ್.ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗ ವಿಶ್ವೇಶ್ವರಯ್ಯ ನಾಲೆಯ ಡ್ಯಾಮೇಜ್ ಭಾಗಗಳಲ್ಲಿ ಮಾತ್ರ ಆಧುನೀಕರಣ ಮಾಡಿದ್ದು ಬಿಟ್ಟರೇ ಈವರೆಗೂ ಯಾವ ಸರ್ಕಾರವೂ ಆಧುನೀಕರಣ ಮಾಡಿರಲಿಲ್ಲ. ಈಗ ನಾಲೆ ಸಂಪೂರ್ಣ ಆಧುನೀಕರಣ ನಡೆಯುತ್ತಿದೆ. ಕಾಮಗಾರಿಯಿಂದ ಮಂಡ್ಯ, ಕೊತ್ತತ್ತಿ, ಮದ್ದೂರು ಹಾಗೂ ಮಳವಳ್ಳಿ ಭಾಗಕ್ಕೂ ನೀರು ವೇಗವಾಗಿ ಹರಿಯುತ್ತದೆ. ಕಾಮಗಾರಿಗೂ ಮುನ್ನ ನೀರು ಕೊನೆ ಭಾಗ ತಲುಪುವುದು ತಡವಾಗುತ್ತಿತ್ತು. ಈಗ ಒಂದೆರಡು ದಿನದಲ್ಲೇ ನೀರು ಕೊನೆ ಹಂತ ತಲುಪುತ್ತದೆ. ಇನ್ನೂ 50 ವರ್ಷಗಳ ಕಾಲ ಇದರ ಉಪಯೋಗ ಪಡೆಯಬಹುದಾಗಿದೆ. ರೈತರು ಗುಣಮಟ್ಟದ ಕೆಲಸ ನಡೆಯುತ್ತಿದೆ ಎಂದು ಸಂತಸಪಡುತ್ತಿದ್ದಾರೆ ಎಂದು ಹೇಳಿದರು.
ಸಚಿವ ಎನ್.ಚಲುವರಾಯಸ್ವಾಮಿ ಅವರು ನಾಲೆ ವೀಕ್ಷಿಸಿದ ವೇಳೆ ಜಮಾಯಿಸಿದ ರೈತರು, ಕಾಮಗಾರಿಯನ್ನು ತ್ವರಿತವಾಗಿ ಸಂಪೂರ್ಣಗೊಳಿಸಿ ಮುಂಗಾರು ಹಂಗಾಮಿನ ಬೆಳೆಗೆ ನೀರು ಒದಗಿಸಬೇಕು. ಹಲವೆಡೆ ಸೋಪನಾಕಟ್ಟೆ ರ‍್ಯಾಂಪ್‌ ಮತ್ತು ಸೇತುವೆಗಳ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.ತಾಲ್ಲೂಕಿನ ಬೆಟ್ಟಹಳ್ಳಿ ಬಳಿ ಜಮಾಯಿಸಿದ ರೈತರು, ಗುಣಮಟ್ಟದಿಂದ ಕೂಡಿದ ಭಾಗಗಲ್ಲಿ ಮಾತ್ರ ನಿಮಗೆ ಕಾಮಗಾರಿಯನ್ನು ತೋರಿಸಲಾಗುತ್ತಿದೆ. ಉಳಿದ ಭಾಗಗಲ್ಲಿ ಕಾಮಗಾರಿ ಕಳಪೆಯಾಗಿಯೇ ಇದೆ. ಕಾಂಕ್ರೀಟ್ ಮಾಡಿದ ಬಳಿಕ ಕ್ಯೂರಿಂಗ್ ಮಾಡುತ್ತಿಲ್ಲ ಎಂದು ಆರೋಪಿಸಿದರೆ, ಮತ್ತೆ ಕೆಲವರು ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!