ಉದಯವಾಹಿನಿ, ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಹಲವು ದಿನಗಳಿಂದ ಸಮರ್ಪಕ ನೀರು ಸೌಲಭ್ಯ ದೊರೆಯದೆ ಇಲ್ಲಿನ ಬಾಗಲಗುಂಟೆಯ ಅನೇಕ ಬಡಾವಣೆಯ ನಿವಾಸಿಗಳು ರಾತ್ರಿ-ಹಗಲು ಪರದಾಡುವಂತಾಗಿದೆ.  ಬರ, ಬೇಸಿಗೆ ನೆಪದಲ್ಲಿ ಕಳೆದ ಎರಡು ತಿಂಗಳುಗಳಿಂದ ಟ್ಯಾಂಕರ್‌ಗಳ ಮೂಲಕ ಇಲ್ಲಿನ ಭೈರವೇಶ್ವರ ನಗರ, ಅಂದಾನಪ್ಪ ಲೇಔಟ್ ವ್ಯಾಪ್ತಿಯಲ್ಲಿ ನೀರು ಸರಬಾರಜು ಮಾಡಲಾಗುತಿತ್ತು. ಆದರೆ, ಕಳೆದ ಹತ್ತು-ಹದಿನೈದು ದಿನಗಳಿಂದ ದಿಢೀರ್ ನೀರು ಪೂರೈಕೆ ಸೌಲಭ್ಯ ನಿಲ್ಲಿಸಿದ್ದು, ಸಾವಿರಾರರು ನಿವಾಸಿಗಳು, ಶಾಲಾ ಮಕ್ಕಳು ನೀರಿಗಾಗಿ ಖಾಲಿ ಬಿಂದಿಗೆ ಹಿಡಿದು ಪರದಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು, ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಲವು ಬಾರಿ ಸ್ಥಳೀಯರು ಕಚೇರಿಗೆ ತೆರಳಿ ದೂರು ಕೊಟ್ಟರೂ, ನಮಗೆ ಮೇಲಿಂದ ನಿರ್ದೇಶನ ಬರಬೇಕೆಂದು ಅಧಿಕಾರಿಗಳು ಸಮಸ್ಯೆಯನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಂದಾನಪ್ಪ ಲೇಔಟ್ ನಿವಾಸಿ ಬಿ.ಜಿ.ಬಸವರಾಜ್, ಈ ಹಿಂದೆ ಸುಮಾರು ೫೦-೭೦ ಮನೆಗಳಿಗೆ ವಾರಕ್ಕೆ ಎರಡು ಬಾರಿ ಮೂರು ಗಂಟೆ ನೀರು ಬರುತ್ತಿತ್ತು. ಈಗ ಪೀಣ್ಯ, ದಾಸರಹಳ್ಳಿ, ಮಂಜುನಾಥನಗರ, ಬಾಗಲಗುಂಟೆ ಸೇರಿದಂತೆ ಹಲವೆಡೆ ವಾರಕ್ಕೊಮ್ಮೆ ೪೫ ನಿಮಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇದರಿಂದ ನೀರನ ಬವಣೆ ಹೇಳಿಕೊಳ್ಳಲಾದರದಷ್ಟು ದೊಡ್ಡದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನೀರು ಪೂರೈಕೆಯಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ ಎಂದು ಮತ್ತೊಬ್ಬ ನಿವಾಸಿ ರಾಮಕೃಷ್ಣ ಅಳಲು ತೋಡಿಕೊಂಡಿದ್ದು, ಈ ಭಾಗದ ಪ್ರತಿ ಮನೆಯವರು ೬,೦೦೦ ಲೀಟರ್ ಟ್ಯಾಂಕರ್ ಲೋಡ್‌ಗೆ ವಾರಕ್ಕೆ ಅಂದಾಜು ೧,೦೦೦ ರೂ. ಖರ್ಚು ಮಾಡಬೇಕಾಗಿದೆ. ಬೇಸಿಗೆಯಲ್ಲಿ ಆರಂಭವಾದ ಉಚಿತ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!