ಉದಯವಾಹಿನಿ, ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತರೆವಾಗಿರುವ ವಿಧಾನಪರಿಷತ್‌ನ ಒಂದು ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಜೂ. 25ರಂದು ಅಧಿಸೂಚನೆ ಹೊರಬೀಳಲಿದೆ.
ಅಂದಿನಿಂದ ಜುಲೈ ಎರಡರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ನಾಮಪತ್ರ ಸಲ್ಲಿಕೆಗೆ ಜುಲೈ 2 ಕಡೆಯ ದಿನವಾಗಿದೆ. ವಿಧಾನಸಭೆ ಸದಸ್ಯರಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಈ ಉಪ ಚುನಾವಣೆ ನಡೆಯಲಿದೆ. 2028ರ ಜೂ.14 ರವರೆಗೆ ಈ ಚುನಾವಣೆಯಲ್ಲಿ ಆಯ್ಕೆಯಾಗುವ ಸದಸ್ಯರ ಅವಧಿ ಇರಲಿದೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನಗೊಂಡು ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು ಪರಾಭವಗೊಂಡಿದ್ದರು. ನಂತರ ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಈಗ ಮತ್ತೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶೆಟ್ಟರ್ ಚುನಾಯಿತರಾಗಿದ್ದಾರೆ.ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಯುವುದರಿಂದ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಚುನಾಯಿತರಾಗಲಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಈ ಉಪಚುನಾವಣೆಯಿಂದ ದೂರ ಉಳಿಯುವ ಸಾಧ್ಯತೆಗಳಿವೆ.
.
