ಉದಯವಾಹಿನಿ, ಹಾವೇರಿ: ಹಾನಗಲ್ ತಾಲ್ಲೂಕಿನ ಸೋಮಸಾಗರ ಗ್ರಾಮದಲ್ಲಿ ಬೇಸಿಗೆಯಲ್ಲಿ ಎದುರಾದ ನೀರಿನ ಹಾಹಾಕಾರ ಮಾನ್ಸೂನ್ ಮಳೆ ಆರಂಭವಾದರೂ ಕಡಿಮೆಯಾಗಿಲ್ಲ. ಗ್ರಾಮ ಪಂಚಾಯಿತಿಯ ಬಹುತೇಕ ಕೊಳವೆಬಾವಿಗಳು ಬತ್ತಿದ್ದು, ರೈತರ ಜಮೀನಿನ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.ಈ ನೀರಿಗಾಗಿ ಮಹಿಳೆಯರು ನಡುರಾತ್ರಿಯಲ್ಲಿ ಕಾಯುತ್ತ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಕೇಂದ್ರದಿಂದ 24 ಕಿ.ಮೀ ಹಾಗೂ ತಾಲ್ಲೂಕು ಕೇಂದ್ರದಿಂದ 29 ಕಿ.ಮೀ ದೂರದಲ್ಲಿರುವ ಸೋಮಸಾಗರ ಗ್ರಾಮದಲ್ಲಿ ಮೂರು ತಿಂಗಳಿನಿಂದ ನೀರಿನ ಸಮಸ್ಯೆ ವಿಪರೀತವಾಗಿದೆ. ಬಳಸಲು ಹಾಗೂ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಹಲವು ತಾತ್ಕಾಲಿಕ ಕ್ರಮಗಳನ್ನು ಕೈಗೊಂಡರೂ ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ರೈತರ ಜಮೀನು ನೀರು ಖರೀದಿ: ನೀರಿನ ಸಮಸ್ಯೆ ಹೆಚ್ಚಾಗಿದ್ದರಿಂದ ಗ್ರಾಮ ಪಂಚಾಯಿತಿಯವರು ರೈತರ ಜಮೀನಿನಲ್ಲಿರುವ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಇವುಗಳ ಮೂಲಕ ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಹೆಸ್ಕಾಂನವರು 3 ಪೇಸ್ ವಿದ್ಯುತ್ ನೀಡಿದ ಸಂದರ್ಭದಲ್ಲಿ ಮಾತ್ರ ನೀರು ತುಂಬಿಕೊಳ್ಳಲು ಅವಕಾಶವಿದೆ. ಹೀಗಾಗಿ, ರಾತ್ರಿ ಹಾಗೂ ಹಗಲಿನಲ್ಲಿ ಮಹಿಳೆಯರು ಕೊಡ ಹಿಡಿದು ಕೊಳವೆಬಾವಿಗಳ ಬಳಿ ಕಾಯುತ್ತ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ.
ಗ್ರಾಮದಲ್ಲಿ ನೀರಿನ ಹಾಹಾಕಾರವಿದೆ. ಮನೆಗಳಿಗೆ ನೀರು ಬರುವುದು ನಿಂತು ಹಲವು ತಿಂಗಳಾಯಿತು. ಗ್ರಾಮದಲ್ಲಿರುವ ಕೊಳವೆಬಾವಿಗಳೂ ಬತ್ತಿವೆ. ಈಗ ರೈತನ ಹೊಲದ ನೀರೇ ಗತಿಯಾಗಿದೆ. ಈ ನೀರಿಗಾಗಿ ನಡುರಾತ್ರಿ ಸರದಿಯಲ್ಲಿ ನಿಲ್ಲುತ್ತಿದ್ದೇವೆ’ ಎಂದು ಗ್ರಾಮದ ನಿವಾಸಿ ರೇಖಾ ಹೇಳಿದರು.’ರಾತ್ರಿ 10 ಗಂಟೆಯಿಂದ 6 ಗಂಟೆ ಅವಧಿಯಲ್ಲಿ 3 ಗಂಟೆ ಹಾಗೂ ಹಗಲಿನಲ್ಲಿ 4 ಗಂಟೆ ವಿದ್ಯುತ್ ಇರುತ್ತದೆ. ಹಗಲಿನಲ್ಲಿ ಮನೆ ಹಾಗೂ ಹೊಲ ಕೆಲಸ ಇರುತ್ತದೆ. ಹೀಗಾಗಿ, ರಾತ್ರಿಯೇ ಕೊಳವೆ ಬಾವಿ ಬಳಿ ಬಂದು ಸರದಿ ನಿಲ್ಲುತ್ತೇವೆ. ಎಷ್ಟೇ ರಾತ್ರಿಯಾದರೂ ಕಾದು ನೀರು ತುಂಬಿಕೊಂಡು ಹೋಗುತ್ತೇವೆ’ ಎಂದು ತಿಳಿಸಿದರು.ಕುಡಿಯುವ ನೀರಿಗಾಗಿ ಅಲೆದಾಟ: ‘ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರಿಲ್ಲ. ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಗುಡ್ಡದ ಮುತ್ತಳ್ಳಿ ಹಾಗೂ 7 ಕಿ.ಮೀ ದೂರದಲ್ಲಿರುವ ಚಿಕ್ಕಬಾಸೂರಿಗೆ ಹೋಗಿ ಶುದ್ಧ ನೀರು ತರುತ್ತಿದ್ದೇವೆ. ಗ್ರಾಮದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು’ ಎಂದು ಗ್ರಾಮಸ್ಥ ಅರುಣ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!