ಉದಯವಾಹಿನಿ, ದಾವಣಗೆರೆ: ನೀಟ್ ಪರೀಕ್ಷೆಯಲ್ಲಿ ನಡೆದಿರುವ ಲೋಪ ಖಂಡಿಸಿ ಹಾಗೂ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದ ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿದರು ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.ಈ ವೇಳೆ ಮಾತನಾಡಿದ ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ವಿ.ವರುಣ್ ಕಳೆದ ಜೂನ್ 4 ರಂದು ನೀಟ್ ಫಲಿತಾಂಶ ಪ್ರಕಟಗೊಂಡಿದ್ದು ಫಲಿತಾಂಶದಲ್ಲಿ 67 ವಿದ್ಯಾರ್ಥಿಗಳು 720 ಕ್ಕೆ 720 ಅಂಕ ಪಡೆದಿದ್ದಾರೆ. 67 ವಿದ್ಯಾರ್ಥಿಗಳ ಪೈಕಿ 12 ಜನ ವಿದ್ಯಾರ್ಥಿಗಳು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ದೇಶಾದ್ಯಂತ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು.
ಇದರಲ್ಲಿ ಒಂದೇ ರಾಜ್ಯದ ಒಂದೇ ಜಿಲ್ಲೆಯ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು 720 ಕ್ಕೆ 720 ಅಂಕ ಪಡೆದಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ನೀಟ್ ಪರೀಕ್ಷೆಯಲ್ಲಿ 180 ಪ್ರಶ್ನೆಗಳಿದ್ದು. ಸರಿ ಉತ್ತರಕ್ಕೆ 4 ಅಂಕ, ತಪ್ಪು ಉತ್ತರಕ್ಕೆ ಮೈನಸ್ ಒಂದು ಅಂಕವಿರುತ್ತದೆ.
ಆದರೆ ಈ ಫಲಿತಾಂಶದಲ್ಲಿ ಸುಮಾರು ವಿದ್ಯಾರ್ಥಿಗಳು 717, 718, 719 ಅಂಕ ಪಡೆದಿರುತ್ತಾರೆ. ಇದು ಸಾಧ್ಯವಿಲ್ಲ. ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದು ಯಾವ ಆಧಾರದ ಮೇಲೆ ಕೊಟ್ಟಿದ್ದಾರೆ ಎಂದು ಸ್ಪಷ್ಟ ಮಾಹಿತಿಯನ್ನು ಸಹ ಎನ್.ಟಿ.ಎ. ನೀಡಿಲ್ಲ.
ಜೂನ್ 14. ಪ್ರಕಟಿಸಬೇಕಿದ್ದ ಫಲಿತಾಂಶವನ್ನು 4 ರಂದೇ ಪ್ರಕಟಿಸಿದ್ದು, ಅದೇ ದಿನ ಲೋಕಸಭಾ ಚುನಾವಣಾ ಫಲಿತಾಂಶವಿದ್ದ ಕಾರಣ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಒತ್ತಾಯಿಸಿದರು. ಈ ಮೊದಲೇ ಎನ್.ಟಿ.ಎ. ಗೆ ಸೂಕ್ತ ತನಿಖೆಗೆ ಒಂದು ಮನವಿ ಪತ್ರ ನೀಡಲಾಗಿತ್ತು. ಅದರ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ 0.001% ಕೂಡ ಗೊಂದಲ ಇದ್ದರೆ ಅದನ್ನು ಸರಿಪಡಿಸಬೇಕೆಂದು ಎನ್.ಟಿ.ಎ. ಗೆ ಆದೇಶ ನೀಡಿತ್ತು. ಆದರೂ ಸಹ ಎನ್.ಟಿ.ಎ. ವತಿಯಿಂದ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
