ಉದಯವಾಹಿನಿ, ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಗಾರೆ ಮೆಸ್ತ್ರಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಯಾಗಿರುವ ದುರ್ಘಟನೆ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆ ಪಾರ್ಕ್ ಬಳಿ ನಡೆದಿದೆ.
ಮಲ್ಲೇಶ್ವರಂನ ಎಂಡಿ ಬ್ಲಾಕ್ ನಿವಾಸಿ ಪನ್ನಿರ್ ಸೆಲ್ವಂ (೩೭) ಕೊಲೆಯಾದವರು, ನಿನ್ನೆ ಸಂಜೆ ಕೆ.ಸಿ ಜನರಲ್ ಆಸ್ಪತ್ರೆ ಪಾರ್ಕ್‌ನಲ್ಲಿ ಪನ್ನಿರ್ ಸೆಲ್ವಂನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಪನ್ನೀರ್ ಸೆಲ್ವಂ ಪತ್ನಿ, ನಾಲ್ವರು ಮಕ್ಕಳ ಜತೆ ವಾಸವಾಗಿದ್ದು,
ನಿನ್ನೆ ಸಂಜೆ ಪಾರ್ಕ್ ಬಳಿ ತೆರಳಿದ್ದ ಅವರ ಜೊತೆ ಮದ್ಯದ ಅಮಲಿನಲ್ಲಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ.
ಮೂವರು ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಇಬ್ಬರು ದುಷ್ಕರ್ಮಿಗಳು ಸೆಲ್ವಂ ತಲೆ ಮೇಲೆ ಕಲ್ಲು ಎತ್ತಿಹಾಕಿ ಸೆಲ್ವಂನನ್ನು ಕೊಲೆ ಮಾಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಮಲ್ಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
