ಉದಯವಾಹಿನಿ, ಬೆಂಗಳೂರು: ಹಾಲಿನ ದರವೇ ಹೆಚ್ಚಳವಾಗಿಲ್ಲ. ಹಾಗಿದ್ದರೂ ಹೋಟೆಲ್‌ನವರು ಕಾಫಿ, ಟೀ ಬೆಲೆಯನ್ನು ಹೇಗೆ ಹೆಚ್ಚಳ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ಬೆಲೆ ಹೆಚ್ಚಳವಾಗಿಲ್ಲ ಎಂದು ಪುನರುಚ್ಚರಿಸಿದರು.ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 90 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಈಗ ಅದು 99 ಲಕ್ಷ ಲೀಟರ್‌ಗೆ ಹೆಚ್ಚಾಗಿದೆ. ಹೆಚ್ಚುವರಿ ಹಾಲಿನ ಮಾರುಕಟ್ಟೆ ಕಲ್ಪಿಸಬೇಕು. ರೈತರು ಹೈನುಗಾರರು ಉತ್ಪಾದಿಸಿದ ಹಾಲನ್ನು ಖರೀದಿಸುವುದಿಲ್ಲ ಎಂದು ನಿರಾಕರಿಸಲು ಸಾಧ್ಯವೇ? ಅಥವಾ ಹಾಲನ್ನು ಚೆಲ್ಲಿಬಿಡಲಾಗುತ್ತದೆಯೇ  ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಹೆಚ್ಚುವರಿ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಅರ್ಧ ಲೀಟರ್‌ ಮತ್ತು ಒಂದು ಲೀಟರ್‌ ಹಾಲಿನ ಪೊಟ್ಟಣಕ್ಕೆ 50 ಎಂಎಲ್‌ ಅನ್ನು ಹೆಚ್ಚುವರಿಯಾಗಿ ಸೇರಿಸಿ ಅದಕ್ಕೆ ತಗಲುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ.   ಹೀಗಿರುವಾಗ ಹಾಲಿನ ದರ ಎಲ್ಲಿ ಹೆಚ್ಚಾಗಿದೆ ಎಂದು ತಿರುಗೇಟು ನೀಡಿದರು.ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ಹೇಳುವುದನ್ನು ನಂಬುವವರಿಗಾದರೂ ವಿವೇಚನೆ ಬೇಡವೇ? ಎಂದು ಪ್ರಶ್ನಿಸಿದರು. ಹೋಟೆಲ್‌ನವರು ಕಾಫಿ, ಟೀ ಬೆಲೆ ಹೆಚ್ಚಿಸುವ ಅಗತ್ಯವಿಲ್ಲ. ಏಕೆಂದರೆ ಹಾಲಿನ ಬೆಲೆ ಹೆಚ್ಚಳವಾಗಿಲ್ಲ ಎಂದು ಹೇಳಿದರು. ರಾಹುಲ್‌ಗಾಂಧಿಯವರು ಲೋಕಸಭೆಯ ವಿರೋಧಪಕ್ಷದ ನಾಯಕರಾಗಬೇಕು ಎಂದು ಕಾಂಗ್ರೆಸ್‌‍ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾನು ಪ್ರಸ್ತಾಪ ಮಾಡಿದ್ದೆ. ಪಕ್ಷದ ಇತರ ನಾಯಕರು ಇದನ್ನೇ ಪ್ರತಿಪಾದಿಸಿದ್ದರು. ಈಗ ರಾಹುಲ್‌ಗಾಂಧಿ ಜವಾಬ್ದಾರಿ ಒಪ್ಪಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.

 

Leave a Reply

Your email address will not be published. Required fields are marked *

error: Content is protected !!