ಉದಯವಾಹಿನಿ, ಯಾದಗಿರಿ: ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಲ್ಲಿ ಹಲವು ತಿಂಗಳಿಂದ ಟ್ರಾಫಿಕ್‌ ಸಿಗ್ನಲ್‌ ಕಣ್ಣುಮುಚ್ಚಿದ್ದು, ಪೊಲೀಸ್ ಇಲಾಖೆ ಇದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ.ಹಳೆ ಬಸ್‌ ನಿಲ್ದಾಣ ಸಮೀಪದ ನೇತಾಜಿ ಸುಭಾಷ್‌ ಚಂದ್ರ ಬೋಸ್ ವೃತ್ತದಲ್ಲಿ ಮಾತ್ರ ಟ್ರಾಫಿಕ್‌ ಸಿಗ್ನಲ್‌ ಕಾರ್ಯನಿರ್ವಹಿ ಸುತ್ತಿದೆ.
ಹಳೆ, ಹೊಸ ಬಸ್‌, ರೈಲು ನಿಲ್ದಾಣ, ಹಳೆ ನಗರಕ್ಕೆ ತೆರಳುವ ರಸ್ತೆಗಳು ಶಾಸ್ತ್ರಿ ವೃತ್ತದಲ್ಲಿ ಸೇರುವುದರಿಂದ ಟ್ರಾಫಿಕ್‌ ಸಿಗ್ನಲ್‌ ಇದ್ದರೂ ಬೆಳಗುತ್ತಿಲ್ಲ. ಇದರಿಂದ ಅಡ್ಡಾದಿಡ್ಡಿವಾಹನ ಸಂಚಾರ ಮಾಡುವುದು ಕಂಡುಬರುತ್ತಿದೆ.
ನಗರವೂ ದಿನೇ ದಿನೇ ವಿಸ್ತರಣೆಗೊಳ್ಳುತ್ತಿರುವ ಕಾರಣ ಅಲ್ಲಲ್ಲಿ ಟ್ರಾಫಿಕ್‌ ಸಿಗ್ನಲ್‌ ಅವಶ್ಯವಿದೆ ಎಂಬುದು ನಗರ ನಿವಾಸಿಗಳ ಆಗ್ರಹವಾಗಿದೆ.
ಎರಡು ಕಡೆ ಮಾತ್ರ ಸಿಗ್ನಲ್‌: ನಗರದ ಸುಭಾಷ್ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಮಾತ್ರ ಸಿಗ್ನಲ್‌ಗಳಿವೆ. ಇದರಲ್ಲಿ ಸುಭಾಷ್ ವೃತ್ತದಲ್ಲಿ ಮಾತ್ರ ಸಿಗ್ನಲ್‌ ಲೈಟ್‌ ಚಾಲನೆಯಲ್ಲಿದೆ. ಇಲ್ಲಿಯೂ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ಇವು ಮುಖ್ಯ ರಸ್ತೆಯಾಗಿದ್ದರಿಂದ ಹಲವು ವಾಹನಗಳು ಸಂಚರಿಸುತ್ತವೆ. ಆದರೆ, ಇಲ್ಲಿ ಸಂಚಾರ ಪೊಲೀಸರು ಇರುವುದಿಲ್ಲ. ಇದರಿಂದ ವಾಹನ ಸವಾರರಿಗೆ ಯಾವುದೇ ಭಯ ಇರುವುದಿಲ್ಲ.
‘ನಗರದ ರಾಷ್ಟ್ರಿಯ ಹೆದ್ದಾರಿಯ ಒಂದೇ ರಸ್ತೆಯಲ್ಲಿ ಎರಡು ಸಿಗ್ನಲ್‌ಗಳಿವೆ. ಅದು ಒಂದು ಕಡೆ ಮಾತ್ರ ಸಿಗ್ನಲ್‌ ದೀಪ ಬೆಳಗುತ್ತಿದೆ. ಉಳಿದೆಡೆ ಬಂದ್‌ ಆಗಿದೆ. ಜನದಟ್ಟಣೆ ಇರುವ ಗಂಜ್‌ ವೃತ್ತ, ಹತ್ತಿಕುಣಿ ಕ್ರಾಸ್‌ ಬಳಿ ಟ್ರಾಫಿಕ್‌ ಸಿಗ್ನಲ್‌ ಅವಶ್ಯವಿದೆ. ಆದರೆ, ಇದ್ದ ಕಡೆಯೇ ಪೊಲೀಸ್‌ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಜನತೆ ತೊಂದರೆ ಅನುಭವಿಸುತ್ತಾರೆ’ ಎಂದು ನಗರ ನಿವಾಸಿ ಬಸವರಾಜ ಪಾಟೀಲ ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!