ಉದಯವಾಹಿನಿ, ಬಸವಕಲ್ಯಾಣ: ನಗರದ ಶಾಂತಿನಿಕೇತನ ಶಾಲೆಯ ಮೈದಾನದ ಚರಂಡಿಯಲ್ಲಿ ಸಿಕ್ಕ ಮತದಾರರ ಗುರುತಿನ ಚೀಟಿಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠೀಣ ಶಿಕ್ಷೆ ನೀಡಬೇಕು ಎಂದು ಇಲ್ಲಿಯ ಕಾಂಗ್ರೇಸ್ ಪಕ್ಷದ ಮುಖಂಡರ ನಿಯೋಗ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿತು.
ಇಲ್ಲಿಯ ತಹಸೀಲ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಜನ ಸ್ಪಂದನಾ ಸಭೆಯ ಮುಂಚಿತವಾಗಿ ಡಿಸಿ ಅವರನ್ನು ಭೇಟಿ ಮಾಡಿದ ನಿಯೋಗ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿತು. ಚರಂಡಿಯಲ್ಲಿ ಸಿಕ್ಕ ಮತದಾರರ ಗುರುತಿನ ಚೀಟಿ ಚುನಾವಣಾ ವ್ಯವಸ್ಥೆಗೆ ಪ್ರಶ್ನೆ ಮಾಡುವಂತಾಗಿದೆ. ಹಾಗೂ ಸಾರ್ವಜನಿಕರಲ್ಲಿ ಸಂಶಯ ಪಡುವಂತಹ ಪ್ರಕರಣ ಬಂದಿರುವುದರಿಂದ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ಮತದಾರರ ಚೀಟಿಗಳು ಯಾವ ವರ್ಷದಲ್ಲಿ ಮತದಾರರಿಗೆ ನೀಡಲಾಗಿತ್ತು. ಮತ್ತು ಯಾವ ಅಧಿಕಾರಿಗಳು ಮತದಾರರ ನೊಂದಣಾಧಿಕಾರಿಗಳಾಗಿ ಅಧಿಕಾರದಲ್ಲಿದ್ದರು. ಈ ಮತದಾರರ ಚೀಟಿಗಳ ಮೂಲ ಪ್ರತಿಗಳು ಅಥವಾ ದ್ವೀಪ್ರತಿ ಎಂಬುದನ್ನು ತನಿಖೆಯಿಂದ ಹೊರ ಬರಬೇಕಾಗಿದ್ದು ಇದರಲ್ಲಿ ಯಾವ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಹಾಗೂ ಯಾವ ರಾಜಕೀಯ ಪಕ್ಷಗಳು ಇದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದನ್ನು ಪ್ರತ್ಯೇಕ ತನಿಖಾ ತಂಡ ರಚಿಸಿ ಸಿಕ್ಕಿರುವ ಗುರುತಿನ ಚೀಟಿಯ ಮತದಾರರಿಗೆ ಸಂಪರ್ಕಿಸಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಮತದಾರರ ಸಂಖ್ಯೆ ಹಾಗೂ ಮತದಾರರಿಗೆ ನೀಡಿರುವ ಗುರುತಿನ ಚೀಟಿಯ ಸಂಖ್ಯೆಗಳನ್ನು ಸಮಗೃವಾಗಿ ಪರಿಶೀಲಿಸಿ ಮುಂದಿನ ಚುನಾವಣೆ ಪಾರದರ್ಶಕವಾಗಿ ನಡೆಯುವಂತಾಗಬೇಕು. ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಪ್ರಕರಣಗಳು ಮರು ಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೇಸ್ ಪಕ್ಷದ ನಿಯೋಗದಲ್ಲಿ ಬ್ಲಾಕ್ ಕಾಂಗ್ರೇಸ್ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ, ನಗರ ಘಟಕದ ಅಧ್ಯಕ್ಷ ಮೀರ ಅಜರಲಿ ನವರಂಗ, ಪ್ರಮುಖರಾದ ಓಂಪ್ರಕಾಶ ಪಾಟೀಲ, ರಾಮ ಜಾಧವ, ಖುತುಬೋದ್ದಿನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
