ಉದಯವಾಹಿನಿ, ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಹೆದ್ದಾರಿಯ ಎರಡೂ ಬದಿಯಲ್ಲಿ ತುಂಬಿದ ಮಣ್ಣು ಮಳೆಗೆ ಕೊಚ್ಚಿ ಹೋಗದಂತೆ ತಡೆಯಲು ಗುತ್ತಿಗೆ ಸಂಸ್ಥೆ ಹುಲ್ಲು ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ.
ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ ಸುಮಾರು 48.50 ಕಿ.ಮೀ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಕೆಎನ್‌ಆರ್ ಸಂಸ್ಥೆ ಹೆದ್ದಾರಿ ಬದಿ ಮಣ್ಣು ತುಂಬಿಸಿದ ಇಳಿಜಾರು ಪ್ರದೇಶದ ಮಣ್ಣಿನ ಸಂರಕ್ಷಣೆಗೆ ಈ ತಂತ್ರ ಬಳಸುತ್ತಿದೆ. ಸುಮಾರು 20 ಕಡೆ ತೆಂಗಿನ ನಾರು ಮ್ಯಾಟ್ ಅಳವಡಿಸಿ ರಸ್ತೆಯ ಎರಡೂ ಬದಿಯ ಇಳಿಜಾರಿನಲ್ಲಿ ಹುಲ್ಲು ನೆಡುವ ಕಾಯಕದಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.

ಬಿ.ಸಿ.ರೋಡು ಮುಖ್ಯ ವೃತ್ತದಿಂದ ಪಾಣೆಮಂಗಳೂರು ವರೆಗೆ ಗರಿಷ್ಠ ಪ್ರಮಾಣದಲ್ಲಿ ರಸ್ತೆಯ ಎರಡೂ ಬದಿ ಮಣ್ಣು ಹಾಕಿ ರಸ್ತೆ ಎತ್ತರಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಹುಲ್ಲು ನೆಡುವ ಕೆಲಸ ಆರಂಭಗೊಂಡಿದೆ. ಇದಕ್ಕಾಗಿ ತಮಿಳುನಾಡು ಮೂಲದ ಪ್ರತ್ಯೇಕ ಗುತ್ತಿಗೆ ಸಂಸ್ಥೆಯ ಕಾರ್ಮಿಕರನ್ನು ಕರೆತಂದು ಕಾಮಗಾರಿ ಪೂರ್ಣಗೊಂಡ ಸ್ಥಳಗಳ ರಸ್ತೆಯ ಎರಡೂ ಬದಿ ಮ್ಯಾಟ್ ಅಳವಡಿಸಲಾಗುತ್ತಿದೆ. ಇಂಥ ರಸ್ತೆ ಬದಿ ವಾಹನ ಕೆಳಗೆ ಉರುಳಿ ಬೀಳದಂತೆ ತಡೆಯಲು ಕಬ್ಬಿಣದ ತಡೆಬೇಲಿಯನ್ನೂ ಅಳವಡಿಸಲಾಗಿದೆ.

ಮಳೆಗಾಲದಲ್ಲಿ ಈ ಹುಲ್ಲು ಹೆಚ್ಚಿನ ಎತ್ತರಕ್ಕೆ ಬೆಳೆದು ಬೇರುಗಳೂ ವಿಸ್ತಾರವಾಗಿ ಹರಡಿ ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ. ಹೆದ್ದಾರಿಗೆ ಬಳಸಿದ ಮಣ್ಣಿನ ರಕ್ಷಣೆ ಜೊತೆಗೆ ಹೆದ್ದಾರಿ ಬದಿ ಸೌಂದರ್ಯವೂ ವೃದ್ಧಿಸಲಿದೆ ಎನ್ನುತ್ತಾರೆ ಸ್ಥಳೀಯ ವರ್ತಕರು. ಈ ಗುತ್ತಿಗೆ ಸಂಸ್ಥೆಯು ಒಟ್ಟು 10 ವರ್ಷ ಇದರ ನಿರ್ವಹಣೆ ಮಾಡಲಿದೆ. ಹುಲ್ಲು ಎತ್ತರಕ್ಕೆ ಬೆಳೆದಾಗ ಅದನ್ನು ಕಟಾವು ಮಾಡಿ ಮತ್ತೆ ಅದನ್ನು ಸೊಂಪಾಗಿ ಬೆಳೆಯುವಂತೆ ನಿರ್ವಹಣೆ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ ಎಂದು ಕೆಎನ್‌ಆರ್ ಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿ ನಂದಕುಮಾರ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!