ಉದಯವಾಹಿನಿ, ಲಕ್ಷ್ಮೇಶ್ವರ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಶೇ 50.15ಕ್ಕೆ ಹೆಚ್ಚಿಸುವಲ್ಲಿ ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯ್ತಿ ಯಶಸ್ವಿಯಾಗಿದೆ.
ಮಹಿಳೆಯರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯ್ತಿ ವತಿಯಿಂದ ಕೈಗೊಳ್ಳಲಾದ ವಿಶೇಷ ಕಾಳಜಿ ಸದ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ನರೇಗಾದಡಿ ಸಮಾನ ಕೂಲಿ ಸಿಗುತ್ತದೆ. ಹೀಗಿದ್ದರೂ ಯೋಜನೆ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಇದನ್ನು ಮನಗಂಡ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರು ಮಹಿಳೆಯರಿಗೆ ಹೆಚ್ಚು ಹೆಚ್ಚು ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿಸಲು ಎಲ್ಲ ಪಿಡಿಒ ಮತ್ತು ಪಂಚಾಯತಿ ಸಿಬ್ಬಂದಿಗೆ ನಿರ್ದೇಶನ ನೀಡಿದ ಪರಿಣಾಮ ತಾಲ್ಲೂಕಿನಲ್ಲಿ ಮಹಿಳಾ ಕೆಲಸಗಾರರ ಪ್ರಮಾಣದಲ್ಲಿ ಏರಿಕೆಯಾಗಿದೆ. ಪುರುಷ, ಮಹಿಳೆ ಎಂಬ ತಾರತಮ್ಯ ಇಲ್ಲದೆ ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ಪಡೆಯಬಹುದಾಗಿದೆ. ಯೋಜನೆಯಡಿ ಒಂದು ದಿನಕ್ಕೆ ₹349 ಕೂಲಿ ನೀಡಲಾಗುತ್ತದೆ. ಸಮಾನ ವೇತನ ನೀತಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಸಂದಾಯ ಇದ್ದರೂ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಪುರುಷ ಕಾರ್ಮಿಕರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ46-47ರಷ್ಟು ಮಾತ್ರ ಇತ್ತು. ಉದ್ಯೋಗ ಖಾತ್ರಿಯತ್ತ ಮಹಿಳೆಯರನ್ನು ಸೆಳೆಯುವಲ್ಲಿ ತಾಲ್ಲೂಕು ಪಂಚಾಯ್ತಿ ಯಶಸ್ವಿಯಾಗಿದೆ.
