ಉದಯವಾಹಿನಿ, ಕೋಲಾರ : ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಾಯಿ ಹಾಗೂ ಕೋತಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರಿದ್ದು, ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರೀಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು ರಕ್ಷಣೆ ನೀಡಬೇಕು ನಾಯಿ ಕೋತಿಗಳಿಂದ ಸಾರ್ವಜನಿಕರಿಗೆ ಸೂಕ್ತ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.ರಸ್ತೆಗಳಲ್ಲಿ ಬೀದಿ ನಾಯಿಗಳ ಹಿಂಡು ಹೆಚ್ಚಾಗಿದ್ದು, ಒಂಟಿಯಾಗಿ ಓಡಾಡುವುದಕ್ಕೂ ತೊಂದರೆ ಅನುಭವಿಸುವಂತಾಗಿದೆ. ಬೀದಿ ನಾಯಿಗಳ ಹಾವಳಿಯ ಜತೆಗೆ ಗುಂಪು ಗುಂಪಾಗಿ ಆಗಮಿಸುವ ಕೋತಿಗಳಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಮಕ್ಕಳು-ಮಹಿಳೆಯರು, ಹಿರಿಯ ನಾಗರೀಕರು ಮನೆಗಳಿಂದ ಹೊರ ಬರುವುದಕ್ಕೂ ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಕ್ರಮೇಣ ಏರಿಕೆಯಾಗುತ್ತಿದ್ದು, ಜನರು ರಸ್ತೆಗಳಲ್ಲಿ ಓಡಾಡುವುದಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಯಾವ ರಸ್ತೆಗಳಲ್ಲಿ ನೋಡಿದರೂ ನಾಯಿಗಳ ಹಿಂಡು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತಿದೆ.ರಸ್ತೆಗಳಲ್ಲಿ, ರಸ್ತೆ ಬದಿಗಳಲ್ಲಿ ಮಲಗಿರುತ್ತವೆ. ಅಲ್ಲದೆ ಕಿತ್ತಾಡಿಕೊಂಡು ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನಗಳಿಗೆ ಅಡ್ಡಲಾಗಿ ಬರುವುದರಿಂದ ಅಪಘಾತಗಳಾಗಿ ದ್ವಿಚಕ್ರವಾಹನ ಸವಾರರು ಕೈಕಾಲು ಮುರಿದುಕೊಂಡು ಆಸ್ಪತ್ರೆಗಳಿಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ ವೇಳೆಯಂತೂ ದ್ವಿಚಕ್ರ ವಾಹನ, ಕಾರು ಸೇರಿದಂತೆ ಯಾವ ವಾಹನಗಳು ಕಂಡು ಬಂದರೆ ಸಾಕು ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಓಡಿಸಿಕೊಂಡು ಹೋಗುತ್ತಿವೆ. ಕಾರು, ಟೆಂಪೋಗಳಂತಹ ಬೃಹತ್ ವಾಹನ ಸವಾರರಿಗೆ ನಾಯಿಗಳಿಂದ ತೊಂದರೆಯಾಗುತ್ತಿಲ್ಲವಾದರೂ ದ್ವಿಚಕ್ರ ವಾಹನಗಳ ಸವಾರರಿಗೆ ನಾಯಿಗಳ ಹಾವಳಿ ತೀವ್ರ ತಲೆನೋವಾಗಿ ಪರಿಣಮಿಸಿದೆ. ಕೋತಿಗಳ ಹಾವಳಿ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದ್ದು, ಮಹಿಳೆಯರು- ಮಕ್ಕಳು ನಿತ್ಯವೂ ತೊಂದರೆ ಅನುಭವಿಸುವುದನ್ನು ನೋಡಲಾಗದೆ, ಸಮಸ್ಯೆ ಬಗೆಹರಿಸಿಕೊಡುವಂತೆ ಅನೇಕ ಮಂದಿ ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂಬುದು ಸಾರ್ವಜನಿಕರ ಆರೋಪವಾಗಿದೆ.

Leave a Reply

Your email address will not be published. Required fields are marked *

error: Content is protected !!