ಉದಯವಾಹಿನಿ, ಹೊಸಕೋಟೆ: ನಂದಿ ಬೆಟ್ಟದಲ್ಲಿ ಹುಟ್ಟುವ ದಕ್ಷಿಣ ಪಿನಾಕಿನಿ ನದಿಗೆ ಅಡ್ಡವಾಗಿ 16ನೇ ಶತಮಾನದಲ್ಲಿ ಹೊಸಕೋಟೆ ನಗರ ನಿರ್ಮಾತೃ ತಮ್ಮೇಗೌಡರಿಂದ ನಿರ್ಮಾಣವಾದ 516.84 ಚದರ ಮೈಲು ಜಲಾನಯನ ಪ್ರದೇಶ ಒಳಗೊಂಡಿರುವ ಹೊಸಕೋಟೆ ದೊಡ್ಡಕೆರೆ ಒತ್ತುವರಿ, ಕಸದ ಸಮಸ್ಯೆಯಿಂದ ನಲುಗುತ್ತಿದೆ.ಐತಿಹಾಸಿಕ ಹಿನ್ನೆಲೆಯ ಈ ಕೆರೆ ಹೊಸಕೋಟೆ ಹೆಗ್ಗುರುತು. ಈ ಕೆರೆ ಉಳಿಸಬೇಕೆಂಬ ದೊಡ್ಡ ಕೂಗು ಹಲವು ದಶಕಗಳ್ದು.
ಕೆರೆ ವೈಶಿಷ್ಟ: ಹೊಸಕೋಟೆ ದೊಡ್ಡಕೆರೆ ಎಂದೇ ಪ್ರಸಿದ್ಧವಾಗಿರುವ ಈ ಕೆರೆಯು ಸುಮಾರು 3211 ಎಕರೆ ಜಲಾನಯನ ಪ್ರದೇಶವನ್ನು ಒಳಗೊಂಡಿದೆ. 802.14 ದಶಲಕ್ಷ ಘನ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. 516.84 ಚದರ ಮೈಲಿ ಜಲಾನಯನ ಪ್ರದೇಶವನ್ನು ಒಳಗೊಂಡಿದೆ.
ಅಲ್ಲದೆ ಇದರಲ್ಲಿ 721.93 ದಶಲಕ್ಷ ಘನ ಅಡಿ ಉಪಯುಕ್ತ ನೀರಿನ ಪ್ರಮಾಣವಿದ್ದರೆ ಕೇವಲ 80.21 ದಶಲಕ್ಷ ಘನ ಅಡಿ ಅನುಪಯುಕ್ತ ನೀರಿನ ಪ್ರಮಾಣವಿದೆ. ಅಲ್ಲದೆ, ಈ ಕೆರೆಗೆ ಬೆಂಗಳೂರು ರಸ್ತೆಗೆ ಹೊಂದಿಕೊಂಡು ಇರುವ ಕಟ್ಟೆ 2160 ಮೀಟರ್ ಉದ್ದವಿದೆ.
18 ಗ್ರಾಮಗಳು ಈ ಕೆರೆಯ ಫಲಾನುಭವಿಗಳು: ಈ ಕೆರೆ ನೀರಿನಿಂದ ಕೃಷಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಅವಲಂಭಿತವಾಗಿದ್ದ ಗ್ರಾಮಗಳ ಸಂಖ್ಯೆ 18. ಈ ಕೆರೆಯು ಎಡದಂಡೆ ಕಾಲುವೆ ಉದ್ದ ಸುಮಾರು 11 ಕಿ.ಮೀ. ಆದರೆ, ಬಲದಂಡೆ ಕಾಲುವೆ ಉದ್ದ ಸುಮಾರು 9.50 ಕಿ.ಮೀ. ಆದರೆ, ಇದೀಗ ಬಹುತೇಕ ಎಲ್ಲ ಗ್ರಾಮಗಳಿಗೂ ಈ ನೀರಿನಿಂದ ಯಾವುದೇ ರೀತಿಯ ಉಪಯೋಗವಿಲ್ಲ. ಇತ್ತೀಚೆಗೆ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ದೊಡ್ಡಹುಲ್ಲೂರು ರುಕ್ಕೋಜಿ ಅವರ ಅಧ್ಯಕ್ಷೀಯ ಭಾಷಣದ ಪ್ರಮುಖ ವಿಚಾರವೇ ಹೊಸಕೋಟೆ ದೊಡ್ಡಕೆರೆ ಮತ್ತು ದೊಡ್ಡಹುಲ್ಲೂರಿನ ಅಮಾನಿಕೆರೆ ರಕ್ಷಣೆ. ಹೊಸಕೋಟೆ ದೊಡ್ಡಕೆರೆಯಂತೂ ಒಂದು ಐತಿಹಾಸಿಕವಾದ ಕುರುಹು. ಅದನ್ನು ಉಳಿಸುವ ಪ್ರಮುಖ ಜವಾಬ್ದಾರಿ ನಗರದ ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ. ಅಲ್ಲದೆ, ಜನಪ್ರತಿನಿಧಿಗಳು ಸಹ ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!