ಉದಯವಾಹಿನಿ, ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (ಎನ್.ಎಚ್-275) ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಒಂದೇ ತಿಂಗಳಲ್ಲಿ (ಜೂನ್ 1ರಿಂದ 30ರವರೆಗೆ) 1,61,491 ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು, ಬರೋಬ್ಬರಿ ₹8.99 ಕೋಟಿ ದಂಡ ವಿಧಿಸಿದ್ದಾರೆ.
ಆ ಪೈಕಿ, 9,003 ಪ್ರಕರಣಗಳಿಗೆ ಸಂಬಂಧಿಸಿ ₹48.23 ಲಕ್ಷ ದಂಡವಷ್ಟೇ ಸಂಗ್ರಹವಾಗಿದೆ.ಬಾಕಿ 1,52,488 ಪ್ರಕರಣಗಳ ₹8.51 ಕೋಟಿ ದಂಡವನ್ನು ವಾಹನ ಮಾಲೀಕರು ಪಾವತಿಸಿಲ್ಲ.ಸೀಟ್ ಬೆಲ್ಟ್ ಧರಿಸದಿದ್ದರೆ ಮತ್ತು ಪಥ ಶಿಸ್ತು ಉಲ್ಲಂಘನೆಗೆ ತಲಾ ₹500, ಅತಿವೇಗಕ್ಕೆ ₹1,000 ಮತ್ತು ಚಾಲನೆ ವೇಳೆ ಮೊಬೈಲ್ ಬಳಕೆಗೆ ₹3,000 ದಂಡ ವಿಧಿಸಲಾಗುತ್ತಿದೆ. ಸೀಟ್ ಬೆಲ್ಟ್ ಧರಿಸದ ಪ್ರಕರಣಗಳೇ ಅತಿಹೆಚ್ಚಿವೆ.
ಐ.ಟಿ.ಎಂ.ಎಸ್ ಕಣ್ಗಾವಲು: ಹೆದ್ದಾರಿಯ ಆಯ್ದ 12 ಸ್ಥಳಗಳಲ್ಲಿ ₹3.5 ಕೋಟಿ ವೆಚ್ಚದಲ್ಲಿ ‘ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ’ (ಐ.ಟಿ.ಎಂ.ಎಸ್) ಕ್ಯಾಮೆರಾಗಳನ್ನು ಅಳವಡಿಸಿದ್ದು, ಜೂನ್ 1ರಿಂದ ಸಂಚಾರ ನಿಯಮ ಉಲ್ಲಂಘನೆಗಳು ದಾಖಲಾಗುತ್ತಿವೆ. ಉಲ್ಲಂಘಿಸಿದವರಿಗೆ ತಕ್ಷಣ ‘ಇ-ಚಲನ್’ ಮೂಲಕ ನೋಟಿಸ್ ರವಾನೆಯಾಗುತ್ತಿದೆ.’ನಿಯಮ ಉಲ್ಲಂಘಿಸಿದ ಸ್ಥಳ, ದಿನಾಂಕ, ಸಮಯ, ಉಲ್ಲಂಘನೆಯ ಬಗೆ ಹಾಗೂ ವಾಹನ ನೋಂದಣಿ ಸಂಖ್ಯೆ ಸಹಿತ ಮಾಲೀಕರ ಮೊಬೈಲ್ ಫೋನ್‌ಗೆ ಎಸ್.ಎಂ.ಎಸ್. ರವಾನೆಯಾಗುತ್ತದೆ. ಕಳುಹಿಸಿದ ಲಿಂಕ್ ಮೂಲಕ ದಂಡ ಪಾವತಿಸಬಹುದು. ಉಲ್ಲಂಘನೆ ಬಗ್ಗೆ ಬೆಂಗಳೂರಿನ ಕಂಟ್ರೋಲ್ ರೂಂನಲ್ಲಿ ನಿರಂತರ ಕಣ್ಗಾವಲಿಡಲಾಗಿದೆ’ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಮಾಹಿತಿ ನೀಡಿದರು.60 ಕ್ಯಾಮೆರಾ: 119 ಕಿ.ಮೀ. ಉದ್ದವಿರುವ ಪ್ರವೇಶ ನಿಯಂತ್ರಿತ ಹೆದ್ದಾರಿ ಆರಂಭವಾದ ನಂತರ ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿ 3 ಗಂಟೆಯಿಂದ ಸರಾಸರಿ 90 ನಿಮಿಷಕ್ಕೆ ಇಳಿದಿದೆ.’ವೇಗದ ಮಿತಿ ಗಂಟೆಗೆ 100 ಕಿ.ಮೀ. ನಿಗದಿಪಡಿಸಿದ್ದು, ಅತಿವೇಗದ ಮೇಲೆ ಕಣ್ಗಾವಲಿಡಲು ಹೆದ್ದಾರಿ ಪ್ರಾಧಿಕಾರದಿಂದ 60 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
