ಉದಯವಾಹಿನಿ, ಬೆಂಗಳೂರು: ನೆಲಮಂಗಲದಿಂದ ಪೀಣ್ಯದವರೆಗಿನ ೧೬ ಕಿಮೀ ದೂರದ ೪೦೦ ಕೆವಿ ವಿದ್ಯುತ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ನಗರ ಜಿಲ್ಲಾಧಿಕಾರಿ ಕರೆದಿದ್ದ ಸಭೆಯಲ್ಲೇ ಪ್ರತಿಭಟನೆ ನಾಮಫಲಕಗಳ ಪ್ರದರ್ಶನ ಮಾಡುವ ಮೂಲಕ ಸರ್ಕಾರದ ಪರಿಹಾರದ ಭರವಸೆಯನ್ನು ಧಿಕ್ಕರಿಸಿದ ಪ್ರಸಂಗ ನಡೆಯಿತು.
೨೨೦ ಕೆವಿ ಬಹು ಮಾರ್ಗ(೪ ಸರ್ಕ್ಯೂಟ್ ) ಸ್ಥಾಪನೆ ಮತ್ತು ೪೦೦/೨೨೦ ಕೆವಿ ನೆಲಮಂಗಲ ಉಒಕೇಂದ್ರದಿಂದ ಪೀಣ್ಯದವರೆಗೆ ೪೦೦ ಕೆವಿ ಎರಡು ಪರಿಧಿ ಪ್ರಸರಣ ಮಾರ್ಗದ ಕಾಮಗಾರಿಗೆ ಒಳಪಡುವ ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹಾಗೂ ಯಶವಂತಪುರ ಹೋಬಳಿಗೆ ಸಂಬಂಧಿಸಿದ ಶಿವನಪುರ,ಗೆಜ್ಜಗದಕುಪ್ಪೆ,ನಾರಾಯಣಪಾಳ್ಯ,ಹಾರೋಕ್ಯಾತನಹಳ್ಳಿದೊಂಬರಹಳ್ಳಿ,ಲಕ್ಷ್ಮೀಪುರ,ಶ್ರೀಕಂಠಪುರ,ಕೊಡಗಿ ತಿರುಮಲಪುರ,ದೊಡ್ಡಬಿದರಕಲ್ಲು,ಕರಿಹೋಬನಹಳ್ಳಿ,ನೆಲಗದರನಹಳ್ಳಿ,ಚೊಕ್ಕಸಂದ್ರ ಮತ್ತು ಪೀಣ್ಯ ೨ ನೇ ಹಂತ ಗ್ರಾಮಗಳ ಜಮೀನುಗಳಿಗೆ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದಯಾನಂದ್ ಸಂತ್ರಸ್ತರ ಸಭೆ ಕರೆದಿದ್ದರು.
ಬೆಂಗಳೂರು: ನೆಲಮಂಗಲದಿಂದ ಪೀಣ್ಯದವರೆಗೆ ಕೆಪಿಟಿಸಿಎಲ್ ನಿರ್ಮಿಸಲುದ್ದೇಶಿಸಿರುವ ೪೦೦ ಕೆವಿ ಎರಡು ಪರಿಧಿ ಬಹುಮಾರ್ಗ ವಿದ್ಯುತ್ ಕಾರಿಡಾರ್ ಯೋಜನೆಗೆ ಒಳಪಡುವ ಸೈಟು,ಮನೆ,ಜಮೀನುಗಳಿಗೆ ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ಪರಿಹಾರ ನೀಡುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ್ ಸಭೆಯಲ್ಲಿ ತಿಳಿಸಿದರು.
ಈಗಿರುವ ಹೈಟೆನ್ಷನ್ ಲೈನನ್ನು ೧೨ ಮೀಟರ್ ನಿಂದ ೧೮.೬ ಮೀಟರ್ ಎತ್ತರಕ್ಕೆ ಹಾಕಲಾಗುವುದು.ಇದರ ಕೆಳಗೆ ಬರುವ ಮನೆ,ಸೈಟು,ಜಮೀನುಗಳನ್ನು ಭುಸ್ವಾಧೀನ ಪಡಿಸಿಕೊಳ್ಳದೆ ೨೦೦ ರಷ್ಟು ಪರಿಹಾರ ನೀಡುವುದಲ್ಲದೆ,ಶೇ.೨೫ ರಷ್ಟು ಬಳಕೆ ಶುಲ್ಕವನ್ನು ಸಂತ್ರಸ್ತರಿಗೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಯೋಜನೆಯ ಸಂತ್ರಸ್ತರ ಗಮನಕ್ಕೆ ತರದೆ ಏಕಾಏಕಿ ಕಾಮಗಾರಿ ಟೆಂಡರ್ ಕರೆದಿರುವ ಬಗ್ಗೆ ವಿಧಾನಪರಿಷತ್ ಸದಸ್ಯ ಜವರಾಯಿಗೌಡ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ,ಸದರಿ ಯೋಜನೆಯನ್ನು ಅಂಡರ್ ಗ್ರೌಂಡ್ ಕೇಬಲಿಂಗ್ ಮಾಡಿ ಅಥವಾ ಸಿಂಗಲ್ ಪೋಲ್ ಲೈನ್ ಮಾಡುವ ಮೂಲಕ ಸಾವಿರಾರು ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಮನವಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
