ಉದಯವಾಹಿನಿ, ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಕಿರುವ ಬಟ್ಟೆಗಳು ಮಾತ್ರ ಶುದ್ದವಾಗಿರುತ್ತದೆ. ಆದರೆ ಅವರ ಆಡಳಿತ ಮಾತ್ರ ಅಶುದ್ಧ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಮೂಡಾದಲ್ಲಿ ಸಾವಿರಾರು ಕೋಟಿ ಬ್ರಹಾಂಡ ಭ್ರಷ್ಟಾಚಾರ ನಡೆದಿದೆ. ಇದೆಲ್ಲವೂ ಅವರ ಮೂಗಿನಡಿಯೇ ನಡೆದಿದೆ ಎಂದು ಆರೋಪಿಸಿದರು.
ಮೂಡಾದಲ್ಲಿ ನನ್ನ ಪಾತ್ರವೇನಿಲ್ಲ. ನಾನೇಕೆ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯನವರು ಪ್ರಶ್ನಿಸುತ್ತಾರೆ. ಇದು ಹೇಗಿದೆ ಎಂದರೆ ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಎಂದರೆ ಮೂರು ಮತ್ತೊಂದು ಎಂಬಂತೆ ಸಿದ್ದರಾಮಯ್ಯನವರ ಕಥೆಯೂ ಅದೇ ಆಗಿದೆ ಎಂದು ವ್ಯಂಗ್ಯವಾಡಿದರು.
ನಿಮ ತವರು ಜಿಲ್ಲೆಯಲ್ಲೇ ಅಕ್ರಮ ನಡೆದಿರುವುದಕ್ಕೆ ನೀವೇ ಜವಾಬ್ದಾರಿಯಲ್ಲವೇ? ಇದರಲ್ಲಿ ಅಕ್ರಮ ಎಸಗಿರುವವರು ನಿಮ ಕುಟುಂಬದವರು ಮತ್ತು ಹಿಂಬಾಲಕರು. ನಿಮ ಹಿಂಬಾಲಕರೇ ಇದರಲ್ಲಿ ನೇರ ಫಲಾನುಭವಿಗಳು. ಯಾರನ್ನು ರಕ್ಷಣೆ ಮಾಡಲು ಹೊರಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರಿಗೆ ಅಕ್ರಮಗಳನ್ನು ಎಸಗಿರುವುದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕಲೆ ಚೆನ್ನಾಗಿ ಗೊತ್ತಾಗಿದೆ. ಈ ಹಿಂದೆ ಅರ್ಕಾವತಿ ಪ್ರಕರಣದಲ್ಲೂ ನೂರಾರು ಕೋಟಿ ಭ್ರಷ್ಟಾಚಾರ ವೆಸಗಿ ಮುಚ್ಚಿ ಹಾಕಿದರು. ಕೊನೆಗೆ ರೀಡೂ ಎಂದು ಹೊಸ ವಾಖ್ಯಾನ ಮಾಡಿದರು.
