ಉದಯವಾಹಿನಿ, ಕವಿತಾಳ: ಪಟ್ಟಣದ ವಿವಿಧೆಡೆ ವಿದ್ಯುತ್ ಪರಿವರ್ತಕಗಳು ನೆಲಮಟ್ಟದಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜಮೀನುಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿ ತಂತಿಗಳು ಜೋತು ಬಿದ್ದಿದ್ದು ಕೃಷಿ ಚಟುವಟಿಕೆಗೆ ರೈತರು ಹಿಂದೇಟು ಹಾಕುವಂತಾಗಿದೆ.
ಇಲ್ಲಿನ ಹೊರ ವಲಯದ ಮಿಶ್ರಾ ತೋಟದ ಹತ್ತಿರ, ವಸತಿ ನಿಲಯದ ಎದುರು, ಆನ್ವರಿ ಕ್ರಾಸ್ ಮತ್ತು ಚರ್ಚ್ ಎದುರಿನ ವಿದ್ಯುತ್ ಪರಿವರ್ತಕಗಳನ್ನು ಈ ಹಿಂದೆ ಇಲಾಖೆ ನಿಯಮದಂತೆ ಎತ್ತರದಲ್ಲಿ ಅಳವಡಿಸಿದ್ದರೂ ರಸ್ತೆ ದುರಸ್ತಿ ಸಂದರ್ಭದಲ್ಲಿ ರಸ್ತೆ ಎತ್ತರಿಸಿದ ಪರಿಣಾಮ ಈಗ ಸಣ್ಣ ಮಕ್ಕಳ ಕೈಗೂ ಎಟುಕುವಂತಾಗಿವೆ.
‘ನಿತ್ಯ ಶಾಲಾ ಮಕ್ಕಳು ಓಡಾಡುತ್ತಿದ್ದು ಕೆಳಮಟ್ಟದಲ್ಲಿರುವ ಪರಿವರ್ತಕಗಳನ್ನು ಕುತೂಹಲಕ್ಕೆ ಮುಟ್ಟಿದರೂ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಹೀಗಾಗಿ ಅವುಗಳನ್ನು ಎತ್ತರದಲ್ಲಿಕೆ ಅಳವಡಿಸಬೇಕು’ ಎಂದು ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ಎಂ.ಡಿ.ಮೆಹಬೂಬ್ ಒತ್ತಾಯಿಸಿದರು.ಸಮೀಪದ ಇಟ್ಟಂಗಿ ಭಟ್ಟಿ ಹತ್ತಿರದ ಜಮೀನಿನಲ್ಲಿ ಪರಿವರ್ತಕವನ್ನು ತೆಗೆದು ಖಾಲಿ ಬಿಡಲಾಗಿದೆ, ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿವೆ ಮತ್ತು ತಂತಿಗಳು ಜೋತು ಬಿದ್ದಿವೆ ಅದರ ಸುತ್ತಮುತ್ತ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಂದರೆ ಉಂಟಾಗುತ್ತಿದೆ, ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಮಾಳಪ್ಪ ದಿನ್ನಿ ಆರೋಪಿಸಿದರು.
