ಉದಯವಾಹಿನಿ, ಕಾರಟಗಿ: ಜನರ ಸುರಕ್ಷತೆಯ ಹಿನ್ನೆಲೆಯಲ್ಲಿ ಗ್ರಾಮದ ಶಾಲಾ- ಕಾಲೇಜು, ಜನನಿಬಿಡ ಸ್ಥಳಗಳ ಬಳಿ ರಸ್ತೆಯುಬ್ಬು (ಹಂಪ್ಸ್) ನಿರ್ಮಿಸುವುದು ಸಹಜ. ಅವೈಜ್ಞಾನಿಕ, ಸೂಚನಾ ಫಲಕವಿಲ್ಲದೇ ಭಾರಿ ಗಾತ್ರದಲ್ಲಿ ಹಂಪ್ಸ್ ಹಾಕಿದರೆ ಅನುಕೂಲಕ್ಕಿಂತ ಅಪಘಾತಕ್ಕೆ ಅಹ್ವಾನ ನೀಡಿದಂತೆಯೇ ಸರಿ.ಇಂತಹ ಭಾರಿ ಗಾತ್ರದ ರಸ್ತೆಹುಬ್ಬುಗಳನ್ನು ಸಮೀಪದ ನಾಗನಕಲ್ ಮತ್ತಿತರೆಡೆ ನಿರ್ಮಿಸಲಾಗಿದೆ. ಸುರಕ್ಷತೆಯ ಬದಲು ಇದೇ ಸ್ಥಳದಲ್ಲಿ ಅಪಘಾತಗಳು ನಿರಂತರವಾಗಿ ಆಗುತ್ತಿವೆ. ವೃದ್ಧೆಯೊಬ್ಬರು ಮೃತಪಟ್ಟ ಘಟನೆಯೂ ನಡೆದಿದೆ. ಇಲಾಖೆ, ಗುತ್ತಿಗೆದಾರರು ತಮಗೇನೂ ಸಂಬಂಧವೇ ಇಲ್ಲ ಎಂಬಂತೆ ಜಾಣಮೌನ ತಾಳಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಕಾರಟಗಿಯಿಂದ ನವಲಿವರೆಗೆ ರಸ್ತೆ ನಿರ್ಮಿಸಲಾಗಿದೆ. ನಾಗನಕಲ್ ಗ್ರಾಮದ ಬಳಿ ಎರಡೂ ಭಾಗದಲ್ಲಿ ಭಾರಿ ಗಾತ್ರದ ರಸ್ತೆಹುಬ್ಬು ಹಾಕಲಾಗಿದೆ. ರಾತ್ರಿ ಅಷ್ಟೇ ಅಲ್ಲ, ಹಗಲಲ್ಲೂ ವಾಹನ ಸವಾರರು ಎಚ್ಚರ ತಪ್ಪಿದರೆ, ಆಯತಪ್ಪಿ ಬಿದ್ದು ಆಸ್ಪತ್ರೆ ಸೇರಿದ ಅನೇಕ ಘಟನೆಗಳು ನಿರಂತರವಾಗಿ ಜರುಗುತ್ತಲೇ ಇವೆ. ಸರಣಿ ಅಪಘಾತಗಳು ಸಂಭವಿಸಿದಾಗ ಗುತ್ತಿಗೆದಾರ ಹುಬ್ಬುಗಳ ಮೇಲೆ ರೇಡಿಯಂ ಹಾಕಿ ಕೈತೊಳೆದುಕೊಂಡಿದ್ದಾರೆ. ಆದರೆ ಅಪಘಾತಗಳು ಮರುಕಳಿಸುತ್ತಿವೆ. ಇನ್ನು ಕಾರು, ಲಾರಿ ಮತ್ತಿತರ ವಾಹನಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ.
‘ಹಂಪ್ಸ್‌ಗಳಿಂದ ನಾಗನಕಲ್ ರಸ್ತೆಯು ಅಪಘಾತದ ವಲಯವಾಗಿ ಮಾರ್ಪಟ್ಟಿದೆ’ ಎನ್ನುತ್ತಾರೆ ಗ್ರಾಮದ ನಿವಾಸಿ ಹುಸೇನ್‌ಸಾಬ.
ನಾಗನಕಲ್, ತುಂಗಭದ್ರ ಎಡದಂಡೆ ಮುಖ್ಯನಾಲೆ ಹತ್ತಿರ, ಗುಡೂರು, ಸೋಮನಾಳ ಬಳಿ ರಸ್ತೆಹುಬ್ಬು ಹಾಕಲಾಗಿದೆ. ಅವೈಜ್ಞಾನಿಕ ಹುಬ್ಬುಗಳಿಂದ ಸುರಕ್ಷತೆ ಮಾಯವಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.’ಅಪಾಯಕಾರಿಯಾಗಿ ಪರಿಣಮಿಸಿರುವ ರಸ್ತೆಹುಬ್ಬುಗಳನ್ನು ವೈಜ್ಞಾನಿಕವಾಗಿ ಹಾಕಿ, ಸೂಚನಾಫಲಕ ಅಳವಡಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
