ಉದಯವಾಹಿನಿ, ವಿಜಯಪುರ: ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರಕಾರದ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಎಬಿವಿಪಿ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ಗ್ರಾಮೀಣ ಭಾಗದಿಂದ ಬಡ ಮತ್ತು ಪ್ರತಿಭಾವಂತ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಬೇಕೆಂಬ ಆಶಯವನ್ನು ಇಟ್ಟುಕೊಂಡು ನಗರ ಪ್ರದೇಶಗಳಿಗೆ ಬರುತ್ತಾರೆ, ಆ ವಿದ್ಯಾರ್ಥಿಗಳಿಗೆ ಸರ್ಕಾರಗಳು ಮೂಲಭೂತ ಸೌಲಭ್ಯಗಳನ್ನ ಒದಗಿಸುವುದು ಆದ್ಯ ಕರ್ತವ್ಯವಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾದ ಮೂರು ತಿಂಗಳಗಳ ವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುತ್ತಿಲ್ಲ, ಜೂನ್ ತಿಂಗಳಲ್ಲಿ ಶಾಲೆ- ಕಾಲೇಜುಗಳು ಪ್ರಾರಂಭವಾದರೂ ಸಹಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುವುದರಲ್ಲಿ ಸಪ್ಟೆಂಬರ್ ವರೆಗೂ ತಲುಪುವ ಹಂತವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡುತ್ತಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಮೂರು ತಿಂಗಳುಗಳ ಕಾಲ ಎಲ್ಲಿ ಉಳಿದುಕೊಂಡು ಶಿಕ್ಷಣವನ್ನ ಪಡೆಯಬೇಕು ಎಂಬುವ ಸಾಮಾನ್ಯ ಜ್ಞಾನವು ಸರ್ಕಾರಗಳಿಗೆ ಇಲ್ಲದಂತಾಗಿದೆ, ರಾಜ್ಯ ಸರ್ಕಾರ ಕೂಡಲೇ ಈ ವರ್ಷದ ಹಾಸ್ಟೆಲ್‍ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಕಲ್ಪಿಸಬೇಕೆಂದು ಆಗ್ರಹಪಡಿಸಿದರು.
ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ ಮಾತನಾಡಿ, ಹಾಸ್ಟೆಲ್‍ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಶೇ.40 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳನ್ನ ಕಲ್ಪಿಸಿಕೊಡುವ ವ್ಯವಸ್ಥೆ ಈಗ ನಮ್ಮ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಿದೆ. ಆದರೆ ಇನ್ನುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ವಂಚಿತರಾಗಿ ತಮ್ಮ ಉನ್ನತ ಶಿಕ್ಷಣವನ್ನ ಪಡೆಯಲು ಕಷ್ಟಕರವಾಗುತ್ತಿದೆ, ಸರ್ಕಾರ ಕೂಡಲೇ ಹಾಸ್ಟೆಲ್‍ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿಶೇಷ ಅನುದಾನವನ್ನ ನೀಡಿ ಹಾಸ್ಟೇಲ್‍ಗಳ ಸಂಖ್ಯೆ ಹೆಚ್ಚಳ ಮಾಡಬೇಕು ಹಾಗೂ ಈಗಿರುವ ಹಾಸ್ಟೇಲ್‍ಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
