ಉದಯವಾಹಿನಿ, ಅರಸೀಕೆರೆ: ರಾಜ್ಯದ ಚಿಕ್ಕ ತಿರುಪತಿ ಎಂದೇ ಹೆಸರುವಾಸಿ ಆಗಿರುವ ತಾಲ್ಲೂಕಿನ ಮಾಲೇಕಲ್ ತಿರುಪತಿ ರಾಜಗೋಪುರ ಮತ್ತು ಯಾತ್ರಿ ನಿವಾಸ್ ನಿರ್ಮಾಣವಾಗಿ 5 ವರ್ಷ ಕಳೆದರೂ ಉದ್ಘಾಟನೆಯಾಗದೇ ನನೆಗುದಿಗೆ ಬಿದ್ದಿದ್ದು, ಭಕ್ತರಲ್ಲಿ ಬೇಸರ ಮೂಡಿಸಿದೆ.
ಕಳೆದ ವರ್ಷ ರಥೋತ್ಸವದ ವೇಳೆ ತೇರಿನ ಕಳಸ ಪೊಲೀಸ್ ಸಿಬ್ಬಂದಿ ಮೇಲೆ ಬಿದ್ದಿತ್ತು.
ರಾಜಗೋಪುರ ನಿರ್ಮಾಣವಾದರೂ ಲೋಕಾರ್ಪಣೆ ಆಗದೇ ಇರುವುದು, ಗೋಪುರಕ್ಕೆ ಕಳಸಗಳು ಹಾಕದೇ ಇರುವುದು ಇದಕ್ಕೆ ಕಾರಣ. ತಿಮ್ಮಪ್ಪ ಸೂಚನೆ ನೀಡಿದ್ದಾನೆ ಎಂದು ಗ್ರಾಮಸ್ಥರು, ಭಕ್ತರು ಹೇಳುತ್ತಿದ್ದಾರೆ.
ಶ್ರೀಕ್ಷೇತ್ರಕ್ಕೆ ದೂರದಿಂದ ಯಾತ್ರಾರ್ಥಿಗಳು ಬಂದು ಉಳಿದುಕೊಳ್ಳಲು ಅನುಕೂಲ ಆಗುವಂತೆ ಪ್ರವಾಸೋದ್ಯಮ ಇಲಾಖೆಯಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, 5 ವರ್ಷಗಳ ಹಿಂದೆಯೇ ನಿರ್ಮಿಸಿರುವ ಯಾತ್ರಿ ನಿವಾಸ್ ಇಂದಿಗೂ ಉದ್ಘಾಟನೆ ಆಗದೇ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಚಿಂತೆ ಮಾಡುವಂತಾಗಿದೆ.ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಲಕ್ಷಾಂತರ ಭಕ್ತ ಸಮೂಹ ಹೊಂದಿರುವ ಮಾಲೇಕಲ್ ತಿರುಪತಿ ದೇವಸ್ಥಾನವು ಕೆಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಶ್ರೀಯವರ ಬ್ರಹ್ಮರಥ ಶಿಥಿಲವಾಗಿತ್ತು. 1995 ರಲ್ಲಿ ನೂತನ ರಥವನ್ನು ವಿಶೇಷ ಕೆತ್ತನೆಗಳೊಂದಿಗೆ ಸುಂದರವಾಗಿ ನಿರ್ಮಾಣ ಮಾಡಿ ರಥ ಲೋಕಾರ್ಪಣೆ ಮಾಡಲಾಯಿತು. ರಥದ ಸುರಕ್ಷತೆಗಾಗಿ ಪೂರ್ವಿಕರು ದೇವಾಲಯದ ಮುಂಭಾಗವೇ ರಥದ ಮನೆಯನ್ನು ನಿರ್ಮಿಸಿದ್ದರು. ಅಭಿವೃದ್ಧಿ ಮಾಡುವ ಉದ್ದೇಶದಿಂದ ಮುಂಭಾಗವನ್ನು ಸಂಪೂರ್ಣವಾಗಿ ಕಾಂಕ್ರೀಟ್‌ಮಯ ಮಾಡಲಾಯಿತು. ಈ ವೇಳೆ ಇದ್ದ ರಥದ ಮನೆಯನ್ನು ತೆರವುಗೊಳಿಸಲಾಯಿತು. ಇದೀಗ ರಥದ ಮನೆ ನಿರ್ಮಿಸಲು ಸಾಧ್ಯವಾಗದೇ ಮಳೆ, ಬಿಸಿಲು ಮಳೆಗೆ ಮೈಯೊಡ್ಡಿ ನಿಲ್ಲುವಂತಾಗಿದೆ. ನಂತರ ಸುಂದರ ಕೆತ್ತನೆಯ ಮೂರ್ತಿಗಳನ್ನು ಹೊಂದಿರುವ ರಥವು ಇಂದು ಪ್ಲಾಸ್ಟಿಕ್ ಹೊದಿಕೆಯಲ್ಲಿ ನಿಲ್ಲುವಂತಾಗಿದೆ ಎಂದು ಭಕ್ತರು ದೂರುತ್ತಿದ್ದಾರೆ.
