ಉದಯವಾಹಿನಿ, ಆಲೂರು: ಎರಡು ವರ್ಷಗಳ ಹಿಂದೆ ಬಿದ್ದ ಭಾರಿ ಮಳೆಯಿಂದ ಏರಿ ಒಡೆದಿದ್ದ ಪಾಳ್ಯ ಹೋಬಳಿ ಹುಣಸೆ ಗ್ರಾಮದ ದೊಡ್ಡಕೆರೆಯ ದುರಸ್ತಿ ಕಾಮಗಾರಿಗೆ ಈಗ ಕಾಲ ಕೂಡಿ ಬಂದಿದೆ. ತಾಳೂರು ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ.
2022 ರ ಜುಲೈ 13ರಂದು ಬಿದ್ದ ಭಾರಿ ಮಳೆಯಿಂದ ನೀರಿನ ಒತ್ತಡ ತಾಳಲಾರದೇ, ಮಧ್ಯರಾತ್ರಿ ಏರಿ ಮಧ್ಯಭಾಗಕ್ಕೆ ಒಡೆದು ಹೋಗಿತ್ತು.
ಕೆರೆಯಲ್ಲಿದ್ದ ಸಂಪೂರ್ಣ ನೀರು ಗದ್ದೆಗಳ ಮೇಲೆ ಹರಿದು, ಬದುಗಳು ಒಡೆದು ಕೆರೆ ಆಶ್ರಯ ಪಡೆದಿದ್ದ ಸುಮಾರು 200 ಎಕರೆ ಗದ್ದೆ ಪ್ರದೇಶ ಹಾನಿಗೆ ಒಳಗಾಗಿತ್ತು.
ಈ ಸಂದರ್ಭದಲ್ಲಿ ಕೆಲ ರೈತರು ಭತ್ತ ನಾಟಿ ಮಾಡಲು ಸಸಿ ಮಡಿ ಮಾಡಿದ್ದರು. ಕೆಲ ರೈತರು ಭೂಮಿ ಉಳುಮೆ ಮಾಡಿ ನಾಟಿ ಮಾಡಲು ಸಿದ್ಧತೆ ನಡೆಸಿದ್ದರು. ಬೆಳಗಾಗುವ ವೇಳೆಗೆ ಕೆರೆ ಒಡೆದು ಸುಮಾರು 200 ಕ್ಕೂ ಹೆಚ್ಚು ಕುಟುಂಬಗಳು ನಷ್ಟಕ್ಕೆ ಸಿಲುಕಿದವು. ಭತ್ತವಲ್ಲದೇ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಬೆಳೆಗೂ ಹಾನಿಯಾಗಿತ್ತು.
ಈ ಕೆರೆ ನೀರನ್ನು ಬಳಸಿಕೊಂಡು ಸುಮಾರು 150-200 ಎಕರೆ ಪ್ರದೇಶದಲ್ಲಿ ಭತ್ತ ಮತ್ತು ಅಡಿಕೆ ಕೃಷಿ ಮಾಡಲಾಗುತ್ತಿದೆ. ಎರಡು ವರ್ಷ ಏರಿ ದುರಸ್ತಿ ಮಾಡದೇ ಇದ್ದುದರಿಂದ ಮಳೆ ನೀರು ಹರಿದು ಪೋಲಾಗುತ್ತಿದ್ದು, ಬೆಳೆಗೆ ಉಪಯೋಗವಾಗದೇ ನಷ್ಟವಾಗುತ್ತಿತ್ತು. ಕೆರೆ ಅಚ್ಚುಕಟ್ಟಿನಲ್ಲಿದ್ದ ಬೆಳೆಗಾರರು ವಾರ್ಷಿಕ ಸುಮಾರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದರು. ಎರಡು ವರ್ಷಗಳಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ, ಸರ್ಕಾರ ಈವರೆಗೂ ಕನಿಷ್ಠ ಪರಿಹಾರ ನೀಡಿಲ್ಲ ಎಂದು ರೈತರು ದೂರಿದ್ದಾರೆ.
