ಉದಯವಾಹಿನಿ, ಬೀದರ್: ನಗರದಲ್ಲಿ ಭಾನುವಾರ ಜೈ ಜಗನ್ನಾಥ ದೇವರ ರಥಯಾತ್ರೆ ಸಡಗರ, ಸಂಭ್ರಮದಿಂದ ನಡೆಯಿತು.ನಗರದ ರಾಂಪೂರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ಸದಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ರಥಯಾತ್ರೆಯಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರ ಅವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಆನಂತರ ಶ್ರದ್ಧಾ, ಭಕ್ತಿಯಿಂದ ರಥಯಾತ್ರೆ ನಡೆಯಿತು. ನಗರದ ರಾಂಪೂರೆ ಕಾಲೊನಿ ಬಸವೇಶ್ವರ ವೃತ್ತ, ಬಿ.ವಿ. ಭೂಮರಡ್ಡಿ ಕಾಲೇಜು, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗವಾನ್ ಮಹಾವೀರ ವೃತ್ತ, ಭಗತ್ ಸಿಂಗ್ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಚಿಕ್ಕಪೇಟೆ ರಿಂಗ್‍ರೋಡ್ ನಿಂದ ಜಗನ್ನಾಥ ಮಂದಿರದವರೆಗೆ ರಥಯಾತ್ರೆ ನಡೆಯಿತು.
ಯುವಕ/ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ರಥಯಾತ್ರೆಯಲ್ಲಿ ಭಾಗವಹಿಸಿ ತೇರು ಎಳೆದರು. ಭಕ್ತಿಯಿಂದ ರಥಯಾತ್ರೆಯೊಂದಿಗೆ ಹೆಜ್ಜೆ ಹಾಕಿದರು. ಯುವಕರು ಶ್ವೇತ ವರ್ಣದ ಕುರ್ತಾ ಪೈಜಾಮ ಧರಿಸಿ ಗಮನ ಸೆಳೆದರೆ, ಮಹಿಳೆಯರು ಕೇಸರಿ ವರ್ಣದ ಸೀರೆಗಳಿಂದ ಕಂಗೊಳಿಸಿದರು. ರಥಯಾತ್ರೆಯುದ್ದಕ್ಕೂ ‘ಜೈ ಜಗನ್ನಾಥ’ ಘೋಷಣೆಗಳು ಮೊಳಗಿದವು.
ರಥಯಾತ್ರೆ ಸಾಗಿದ ಮಾರ್ಗದಲ್ಲಿ ಪುಣೆಯ ಕಲಾವಿದರು ವಿಶೇಷ ರೀತಿಯಲ್ಲಿ ರಂಗೋಲಿ ಬಿಡಿಸಿದ್ದರು. ಪ್ರಮುಖ ವೃತ್ತಗಳಲ್ಲಿ ನಗರದ ವ್ಯಾಪಾರಸ್ಥರು, ಭಕ್ತಾದಿಗಳು ಪಾನೀಯ ಮತ್ತು ಪ್ರಸಾದ ವಿತರಿದರು. ಹೋದ ಸಲ ಹೈದರಾಬಾದ್‍ನಿಂದ ರಥ ತರಿಸಲಾಗಿತ್ತು. ಈ ಸಲ ಬೀದರ್‍ನಲ್ಲಿಯೇ ನಿರ್ಮಿಸಿದ ಹೈಡ್ರಾಲಿಕ್ ವ್ಯವಸ್ಥೆಯ ರಥದಲ್ಲಿ ಯಾತ್ರೆ ನಡೆಯಿತು.
