ಉದಯವಾಹಿನಿ, ಬೆರ್ರಿಗಳ ರುಚಿಯನ್ನು ತಿಂದವನೇ ಬಲ್ಲ. ಕೊಂಚ ಹುಳಿ, ಒಂದಿಷ್ಟು ಸಿಹಿ, ಅದರಲ್ಲೇ ಘಮ. ಮಕ್ಕಳಿಗಂತೂ ಇವು ಮನಮೆಚ್ಚಿನವು. ಇವುಗಳಲ್ಲಿ ಹೆಚ್ಚಿನ ಬೆರ್ರಿಗಳು ಭಾರತೀಯ ಮೂಲದ್ದಲ್ಲ. ಹೊರ ದೇಶಗಳಿಂದ ಆಮದಾಗುವ ಅಥವಾ ಇಲ್ಲಿ ಹೊಸದಾಗಿ ಬೆಳೆಯಲ್ಪಡುವ ಅವು, ಇಲ್ಲಿನ ವಾತಾವರಣಕ್ಕೆ ಅಲ್ಲಿಯಂಥ ರುಚಿಯನ್ನು ಕೊಡ ದಿರುವ ಸಾಧ್ಯತೆಯಿದೆ. ಉದಾ, ಸ್ಟ್ರಾಬೆರಿಯನ್ನು ಹೇಳುವುದಾದರೆ, ಇಲ್ಲಿ ನಮಗೆ ದೊರೆಯುವ ಸ್ಟ್ರಾಬೆರಿಗಳು ಸಾಮಾನ್ಯವಾಗಿ ಹುಳಿ. ಆದರೆ ಪಶ್ಚಿಮ ದೇಶಗಳಲ್ಲಿ ಅವು ತಿನ್ನುವುದಕ್ಕೆ ರುಚಿಯಾಗಿಯೂ ಇರುತ್ತವೆ. ನಮ್ಮಲ್ಲಿ ಹುಳಿ ಮತ್ತು ಸಿಹಿ- ಈ ಎರಡೂ ರುಚಿಗಳ ಕಿತ್ತಳೆ ದೊರೆಯುವುದಿಲ್ಲವೇ ಹಾಗೆ.

ವಿಟಮಿನ್‌ ಸಿ ಹೇರಳವಾಗಿರುವ ಈ ಹಣ್ಣಿನಲ್ಲಿ ನಾರು ಸಹ ಭರಪೂರ ಇರುತ್ತದೆ. ರಸಭರಿತ ವಾಗಿದ್ದು, ತಿಂದಷ್ಟಕ್ಕೂ ದಾಹ ತಣಿಸುತ್ತದೆ. ತನ್ನದೇ ವಿಶಿಷ್ಟ ಪರಿಮಳ ಹೊಂದಿರುವ ಈ ಬೆರ್ರಿಯನ್ನು ಇಷ್ಟಪಟ್ಟು ತಿನ್ನುವವರು ಬಹಳಷ್ಟು ಜನರಿದ್ದಾರೆ. ತರಹೇವಾರಿ ಪೋಷಕಾಂಶ ಗಳನ್ನು ಹೊಂದಿರುವ ಈ ಹಣ್ಣನ್ನು ತಿನ್ನುವುದರ ಲಾಭಗಳೇನು ಎಂಬುದನ್ನು ತಿಳಿಯೋಣ. ಹೃದಯದ ಮಿತ್ರ: ಕೆಂಬಣ್ಣದ ರಸಭರಿತ ಸ್ಟ್ರಾಬೆರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಹಾಗಾಗಿ ಹೃದಯವನ್ನು ಕಾಪಿಡುವ ಕೆಲಸವನ್ನಿದು ಚೆನ್ನಾಗಿ ಮಾಡಬಲ್ಲದು. ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸುವುದು, ರಕ್ತದಲ್ಲಿನ ಪ್ಲೇಟ್‌ಲೆಟ್‌ ಸಂಖ್ಯೆಯನ್ನು ವೃದ್ಧಿಸುವುದು, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುವುದು- ಇಂಥ ಉಪಕಾರಿ ಕೆಲಸಗಳನ್ನು ಸ್ಟ್ರಾಬೆರಿ ಮಾಡಬಲ್ಲದು

ಪ್ರತಿರೋಧಕ ಶಕ್ತಿ ಹೆಚ್ಚಳ: ವಿಟಮಿನ್‌ ಸಿ ವಿಫುಲವಾಗಿರುವ ಈ ಹಣ್ಣಿನ ಸೇವನೆಯಿಂದ ಪ್ರತಿರೋಧಕ ಶಕ್ತಿ ಪ್ರಬಲವಾಗುತ್ತದೆ. ಸೋಂಕುಗಳೊಂದಿಗೆ ಹೋರಾಡಲು ದೇಹಕ್ಕೆ ಅಗತ್ಯ ಶಕ್ತಿಯನ್ನಿದು ನೀಡುತ್ತದೆ. ಜೊತೆಗೆ, ಆಹಾರದಲ್ಲಿ ದೊರೆಯುವ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ, ಉರಿಯೂತ ನಿವಾರಣೆಗೆ, ಮೂಳೆಗಳು ಗಟ್ಟಿಯಾಗುವುದಕ್ಕೆ- ಹೀಗೆ ಹಲವಾರು ಕೆಲಸಗಳಿಗೆ ವಿಟಮಿನ್‌ ಸಿ ಅಗತ್ಯವಾಗಿ ಬೇಕು.

Leave a Reply

Your email address will not be published. Required fields are marked *

error: Content is protected !!