ಉದಯವಾಹಿನಿ,  ಬೇಸಿಗೆಯಲ್ಲಿ ಬಗೆಬಗೆ ತಿನ್ನುವುದಕ್ಕಿಂತ, ತಂಪಾಗಿ ದಾಹ ತಣಿಸುವಂಥ ಪೇಯಗಳದ್ದೇ ಭರಾಟೆ. ಎಷ್ಟು ಲೀಟರುಗಟ್ಟಲೆ ನೀರು ಕುಡಿದರೂ ಬಾಯಾರಿಕೆಗೆ ಕೊನೆಯೇ ಇರುವುದಿಲ್ಲ. ಇಂಥ ಹೊತ್ತಿನಲ್ಲಿ ನೆರವಿಗೆ ಬರುವುದು ಜಲ್‌ಜೀರಾ. ಮಾರುಕಟ್ಟೆಯಲ್ಲಿ ದೊರೆಯುವ ಜಲ್‌ಜೀರಾ ಪುಡಿಯನ್ನು ನೀರಿಗೆ ಬೆರೆಸಿ ಕುಡಿಯುವುದು ಒಂದು ರೀತಿ. ಈ ನೀರಿಗೆ ಪುದೀನಾ ಅಥವಾ ಕೊತ್ತಂಬರಿ ಸೊಪ್ಪುಗಳನ್ನು ಬೆರೆಸಿ ಕುಡಿಯುವುದು ಇನ್ನೊಂದು ರೀತಿ. ಹಾಗೆ ನೋಡಿದರೆ, ಜಲ್‌ಜೀರಾ ಪುಡಿಯಲ್ಲೇ ಹಲವು ರೀತಿಯ ಮಸಾಲೆಗಳು ಸೇರಿರುತ್ತವೆ. ಜೀರಿಗೆ, ಶುಂಠಿ ಮತ್ತು ಕಾಳುಮೆಣಸಿನ ಪುಡಿ, ಸೈಂಧವ ಲವಣ, ಒಣಮಾವಿನ ಪುಡಿ, ಕೊತ್ತಂಬರಿ ಮತ್ತು ಪುದೀನಾ ಎಲೆಗಳ ಪುಡಿಗಳು ಇದರಲ್ಲಿ ಸೇರಿರುತ್ತವೆ. ಹಾಗೆಂದೇ ಇದನ್ನು ಕುಡಿದಾಕ್ಷಣ ದಣಿವಾರಿದ ಅನುಭವ ನೀಡುತ್ತದೆ. ಇದನ್ನು ಕುಡಿಯುವುದರಿಂದ ಇನ್ನೂ ಕೆಲವು ಲಾಭಗಳಿವೆ . ಅದೇನೆಂದು ನೋಡೋಣ:

ಬೇಸಿಗೆಗೆ ಸೂಕ್ತ: ದೇಹವನ್ನು ತಣಿಸುವುದಕ್ಕೆ ಅಗತ್ಯವಾದ ವಸ್ತುಗಳು ಜಲ್‌ಜೀರಾದಲ್ಲಿ ಅಡಕವಾಗಿವೆ. ದೇಹಕ್ಕೆ ಅಗತ್ಯವಾದ ಪೂರಕಗಳನ್ನು ಈ ಪಾನೀಯ ಪೂರೈಸುತ್ತದೆ. ಜೊತೆಗೆ ನೀರಿನ ಅಂಶವೂ ದೇಹಕ್ಕೆ ದೊರೆಯುತ್ತದೆ. ಬೇಸಿಗೆಯಲ್ಲಿ ಬೆವರಿ, ಬಳಲಿ, ಬೆಂಡಾಗುವ ಸಂದರ್ಭದಲ್ಲಿ ಒಂದು ಲೋಟ ಜಲ್‌ಜೀರಾ ಬೆರೆಸಿದ ನೀರು ಚೇತೋಹಾರಿ ಅನುಭವವನ್ನು ನೀಡಬಲ್ಲದು.

ಇದನ್ನು ಕೇವಲ ನೀರಿನೊಂದಿಗಷ್ಟೇ ಸೇವಿಸಬೇಕೆಂದಿಲ್ಲ. ನೆಲ್ಲಿಕಾಯಿ, ಬೇಲದಹಣ್ಣು, ಕೋಕಂನಂಥ ಹಣ್ಣುಗಳ ಪಾನಕದ ಜೊತೆಗೆ ಇದನ್ನು ಸೇರಿಸಿಕೊಂಡು ಸೇವಿಸಬಹುದು. ಇದರಿಂದ ರುಚಿ-ಆರಾಮ ಎರಡೂ ದೊರೆಯುತ್ತದೆ. ಮಜ್ಜಿಗೆಯ ಜೊತೆಗೆ ಸೇರಿಸಿಕೊಂಡು ಅಥವಾ ಚಾಸ್‌ ಮಾಡುವಾಗ ಇದನ್ನು ಬಳಸಿದರೆ ಹೆಚ್ಚಿನ ತೃಪ್ತಿಯ ಅನುಭವ ದೊರೆಯಬಲ್ಲದು. ಅಂತೂ ಬೇಸಿಗೆಯಲ್ಲಿ ನಿಮ್ಮಿಷ್ಟದ ಯಾವುದೇ ಪಾನೀಯದ ಜೊತೆಗಿದನ್ನು ಬಳಸಿ ಪ್ರಯತ್ನಿಸುವುದರಲ್ಲಿ ನಷ್ಟವೇನಿಲ್ಲ.

Leave a Reply

Your email address will not be published. Required fields are marked *

error: Content is protected !!