ಉದಯವಾಹಿನಿ, ಮೈಸೂರು: ಮುಡಾ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಬಿಜೆಪಿಯ ಬೇಡಿಕೆಯನ್ನು ತಳ್ಳಿ ಹಾಕಿರುವ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರಣಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಿಂದ ತಮ ಪತ್ನಿಗೆ ಬದಲಿ ನಿವೇಶನ ನೀಡಿರುವುದು ಕಾನೂನುಬದ್ಧವಾಗಿದೆ. ಯಾವುದೇ ಅವ್ಯವಹಾರಗಳಾಗಿಲ್ಲ.
ಭೂಮಿ ಕಳೆದುಕೊಂಡಿರುವುದು ಒಂದು ಪ್ರಕರಣವಾದರೆ, ನಮ ಜಮೀನನ್ನು ಕಾನೂನುಬಾಹಿರವಾಗಿ ಮುಡಾ ಒತ್ತುವರಿ ಮಾಡಿಕೊಂಡಿದೆ. ಇದನ್ನು ಮುಡಾ ತನ್ನ ಸಮಿತಿ ಸಭೆಯಲ್ಲಿ ಒಪ್ಪಿಕೊಂಡಿದೆ ಎಂದರು.ನಮ ಜಮೀನಿಗೆ ಪರಿಹಾರ ಕೇಳಿದಾಗ ವಿಜಯನಗರದಲ್ಲಿ ಜಾಗ ಕೊಟ್ಟಿದ್ದಾರೆ. ನಾವು ಇಂತಹುದೇ ಜಾಗದಲ್ಲಿ ನೀಡಿ ಎಂದು ಕೇಳಿರಲಿಲ್ಲ. ಬಿಜೆಪಿಯವರು ಉದ್ದೇಶಪೂರ್ವಕವಾಗಿಯೇ ಇದರಲ್ಲಿ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಡಾದಿಂದ ನಿಯಮಬಾಹಿರವಾಗಿ ನಿವೇಶನ ಹಂಚಿರುವುದನ್ನು ಇಬ್ಬರು ಐಎಎಸ್‌‍ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ಅಕ್ರಮ ನಡೆದಿರುವುದು ವರದಿಯಲ್ಲಿ ಸಾಬೀತಾ ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಬಿಜೆಪಿಯವರು ಈಗಾಗಲೇ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಮ ಮನೆಗೂ ಮುತ್ತಿಗೆ ಹಾಕಿದ್ದಾರೆ. ಈಗ ಮೈಸೂರಿನಲ್ಲೂ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಅವರು ಏನಾದರೂ ಮಾಡಲಿ. ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪವಾದರೆ ಉತ್ತರ ನೀಡಲು ನಮ ಸರ್ಕಾರ ಸಿದ್ಧವಿದೆ ಎಂದರು.
ಮುಡಾದಲ್ಲಿ ಜನಪ್ರತಿನಿಧಿಗಳ ಸಮಿತಿಯನ್ನು ರದ್ದು ಮಾಡಬೇಕು ಎಂಬ ನಿಟ್ಟಿನಲ್ಲಿ ಕಾನೂನು ರೂಪಿಸುವ ಕುರಿತು ಚರ್ಚೆಗಳಾಗುತ್ತಿವೆ. ಈ ಹಿಂದೆ ರಾಮಣ್ಣ ಅವರು ಅಧ್ಯಕ್ಷರಾಗಿದ್ದಾಗಲೂ ಇದೇ ರೀತಿಯ ಚರ್ಚೆಗಳು ನಡೆದಿದ್ದವು. ಜನಪ್ರತಿನಿಧಿ ಗಳ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!