ಉದಯವಾಹಿನಿ, ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದು, ಉಪಚುನಾವಣೆಗಳ ಸಂದರ್ಭದಲ್ಲೇ ಇಕ್ಕಟ್ಟಿನ ವಾತಾವರಣ ನಿರ್ಮಿಸಿದೆ.ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮರೆಯಲ್ಲಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ನುಂಗಿ ನೀರು ಕುಡಿಯಲು ಭಾರಿ ಸಂಚು ನಡೆದಿತ್ತು. ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಆತಹತ್ಯೆಯಿಂದಾಗಿ ಇಡೀ ಪ್ರಕರಣ ಬೆಳಕಿಗೆ ಬಂದಿದ್ದು, ಸರ್ಕಾರದ ಘಟಾನುಘಟಿಗಳ ಬುಡ ಅಲುಗಾಡುವಂತೆ ಮಾಡಿದೆ.
ನಾಗೇಂದ್ರ ಅವರು ಪರಿಶಿಷ್ಟ ಪಂಗಡದ ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿದೆ. ಆದರೂ ಹಗರಣದಲ್ಲಿ ಅವರನ್ನು ಪ್ರಮುಖ ಪಾತ್ರಧಾರಿ ಎಂದು ಬಿಜೆಪಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ. ಸಚಿವರ ಮೌಖಿಕ ಆದೇಶದ ಮೇಲೆ ಹಣ ವರ್ಗಾವಣೆ ಮಾಡಲಾಯಿತು ಎಂದು ಆತಹತ್ಯೆ ಮಾಡಿಕೊಂಡ ಅಧಿಕಾರಿ ಮರಣಪತ್ರದಲ್ಲಿ ನಮೂದು ಮಾಡಿದ್ದಾರೆ.
ನಾಗೇಂದ್ರ ಅವರು ರಾಜೀನಾಮೆ ನೀಡಿದ ಬಳಿಕ ಇತ್ತೀಚಿನವರೆಗೂ ಅವರನ್ನು ವಿಚಾರಣೆಗೊಳಪಡಿಸುವ ಧೈರ್ಯವನ್ನು ಎಸ್‌ಐಟಿ ಮಾಡಿರಲಿಲ್ಲ. ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಚಿವಾಲಯದ ಅಧಿಕಾರಿಗಳು ಹಾಗೂ ನಾಗೇಂದ್ರ ಅವರ ಆಪ್ತ ಸಹಾಯಕರನ್ನು ವಿಚಾರಣೆ ನಡೆಸಿದ ಮೇಲೆ ಸಚಿವರ ಮೌಖಿಕ ಆದೇಶದ ಬಗ್ಗೆ ಮಾಹಿತಿ ದೊರೆತಿದೆ ಎಂದು ತಿಳಿದುಬಂದಿದೆ.
ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಆಡಳಿತ ಪಕ್ಷದ ಶಾಸಕನನ್ನೇ ಬಂಧಿಸಿದರೆ ಅದು ಬೇರೆ ರೀತಿಯ ಸಂದೇಶ ಹೋಗಬಹುದು ಎಂಬ ಕಾರಣಕ್ಕೆ ಈವರೆಗೂ ತನಿಖೆಯ ನೆಪದಲ್ಲಿ ಕಾಲಾಹರಣ ನಡೆದಿತ್ತು ಎಂದು ತಿಳಿದುಬಂದಿದೆ. ಈಗ ಇಡಿ ದಾಳಿಯಿಂದಾಗಿ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಂತಾಗಿದೆ.
