ಉದಯವಾಹಿನಿ, ಮಾಲೂರು : ತಾಲೂಕಿನ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲಿಸದೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಬ್ರಷ್ಟಾಚಾರ ರಹಿತವಾಗಿ ಫಲಾನುಭವಿಗಳು ನೇರವಾಗಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಕಾನೂನು ಚೌಕಟ್ಟಿನಲ್ಲಿ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ತಾಲೂಕಿನ ಮಾಸ್ತಿ ಗ್ರಾಮದ ಟಿ.ಜಿ. ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ನೌಕರರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜನಸಂಪರ್ಕ ಸಭೆಗಳಲ್ಲಿ ನೀಡುವ ಅರ್ಜಿಗಳಲ್ಲಿ ಶೇಕಡಾ ೯೮ ರಷ್ಟು ಅರ್ಜಿಗಳು ವಿಲೇವಾರಿ ಮಾಡಿದ್ದಾರೆ. ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಬಂದ ಅರ್ಜಿಗಳು ಕಾನೂನು ಚೌಕಟ್ಟಿನಲ್ಲಿ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು, ತಾಲೂಕಿನಲ್ಲಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದೇ ನನ್ನ ಮೂಲ ಧ್ಯೇಯವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಇಲಾಖೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು, ಬಡವರು ಸಾಮಾನ್ಯ ಜನರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಬಂದಾಗ ಅವರಿಗೆ ಸ್ಪಂದಿಸಿ ಅವರ ಬಳಿ ಸೌಜನ್ಯವಾಗಿ ವರ್ತಿಸುವ ಮೂಲಕ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಎಂದ ಅವರು, ರೈತರು ಸ್ವಾಧೀನದಲ್ಲಿರುವ ಪಿ ನಂಬರ್ ಜಮೀನುಗಳು ಸುಮಾರು ವರ್ಷಗಳಿಂದ ದುರಸ್ತಿಯಾಗುತ್ತಿಲ್ಲ, ರೆಕಾರ್ಡ್ ರೂಮುಗಳಲ್ಲಿ ದಾಖಲೆಗಳು ಸಿಗುತ್ತಿಲ್ಲ, ಜಮೀನು ಸ್ವಾಧೀನದಲ್ಲಿರುವ ರೈತರ ಜಮೀನನ್ನು ಸ್ಥಳ ಪರಿಶೀಲನೆ ನಡೆಸಿ ಅವರಿಗೆ ಪಿ ನಂಬರ್ ದುರಸ್ತಿ ಮಾಡಿಕೊಡುವ ಮೂಲಕ ಜಿಲ್ಲಾಧಿಕಾರಿಗಳು ಸರ್ಕಾರದಲ್ಲಿ ಚರ್ಚಿಸಿ ಪಿ ನಂಬರ್ ಜಮೀನಿನ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.
