ಉದಯವಾಹಿನಿ, ಯಳಂದೂರು: ತಾಲ್ಲೂಕಿನ ಸುತ್ತಮುತ್ತ ಮುಂಗಾರು ಸುರಿಯುತ್ತಿದ್ದು ಇಳೆಯ ಗರ್ಭದಲ್ಲಿ ಅಡಗಿ ಕುಳಿತಿದ್ದ ಅಣಬೆಗಳು ದುತ್ತೆಂದು ಹೊರಬಂದಿದ್ದು ಅಣಬೆ ಲೋಕ ಸೃಷ್ಟಿಯಾಗಿದೆ. ಉದರಕ್ಕೆ ಪೋಷಕ ಆಹಾರವನ್ನು ನೀಡುವ ಅಣಬೆಗಳು ಕೊಡೆ ಅಗಲಿಸಿ ನಿಂತಿದ್ದು ಆಕರ್ಷಿಸುತ್ತಿವೆ.
ಈ ಬಾರಿ ನಿರೀಕ್ಷಿಸಿದಷ್ಟು ವರ್ಷಧಾರೆ ಕಂಡಿಲ್ಲವಾದರೂ ಸಂದು-ಗೊಂದು, ಗೊಬ್ಬರದ ತಿಪ್ಪೆ, ಒಣಗಿದ ಮರಗಳ ಕಾಂಡದ ಸುತ್ತ ಹಿರಿ ಕಿರಿ ಅಣಬೆಗಳು ಇಣುಕಿವೆ.ವೈವಿಧ್ಯಮಯ ಆಕಾರ ಮತ್ತು ಶ್ವೇತ ವರ್ಣದಲ್ಲಿ ಬೀಗುತ್ತಿರುವ ಅಣಬೆಗಳು ಎಲ್ಲೆಡೆ ಗಮನ ಸೆಳೆಯುತ್ತಿವೆ.
ಅಣಬೆಗಳ ಜೀವಿತಾವಧಿ ಅಲ್ಪವಾಗಿದ್ದು ಕೆಲವು ಬಗೆಯ ಅಣಬೆಗಳು ಮಾತ್ರ ಅಡುಗೆಗೆ ಬಳಕೆಯಾಗುತ್ತಿದ್ದು, ಹಲವು ಬಣ್ಣದ ಅಣಬೆಗಳು ಕೊಳೆತು ಭೂಮಿ ಸೇರುತ್ತಿವೆ.
ಕಳೆದೊಂದು ತಿಂಗಳಿಂದ ತಾಲ್ಲೂಕಿನಲ್ಲಿ ಅಲ್ಲಲ್ಲಿ ಅಣಬೆಗಳು ಕಾಣಸಿಗುತ್ತಿವೆ. ಶೀಲಿಂಧ್ರ ವರ್ಗಕ್ಕೆ ಸೇರಿದ ಅಣಬೆಗಳು ಸಾವಯವ ವಸ್ತುಗಳಲ್ಲಿ ಅರಳುವ ಕೊಳೆತಿನಿಗಳು. ಬಣ್ಣ, ಆಕಾರ, ಗಾತ್ರದಲ್ಲೂ ವಿಭಿನ್ನ, ವಿಶಿಷ್ಟ ಹಾಗೂ ವಿಶೇಷವಾಗಿ ಕಂಡುಬರುತ್ತವೆ.
ಪರಿಸರದಲ್ಲಿರುವ ಸಸ್ಯ ಮತ್ತು ಪ್ರಾಣಿಜನ್ಯ ಸಾವಯವ ವಸ್ತುಗಳನ್ನು ಕರಗಿಸಿ, ಅಲ್ಲಿನ ಪೋಷಕಾಂಶ ಹೀರಿಕೊಂಡು ಸಸ್ಯಗಳಿಗೂ ಹಂಚುವ ಕೆಲಸವನ್ನು ಅಣಬೆಗಳು ಮಾಡುತ್ತಿವೆ. ಹಾಗಾಗಿ ಅಣಬೆಗಳು ಪರಿಸರ ಸ್ವಚ್ಛತೆಯ ಸೂಚಕವೆಂದೂ ಪರಿಗಣಿಸಲಾಗುತ್ತದೆ ಎನ್ನುತ್ತಾರೆ ಗಿಡಮೂಲಿಕ ತಜ್ಞರಾದ ಬಿಳಿಗಿರಿಬೆಟ್ಟದ ಬೊಮ್ಮಯ್ಯ.
ಪ್ರಪಂಚದಲ್ಲಿ 13 ಸಾವಿರಕ್ಕಿಂತ ಹೆಚ್ಚಿನ ಜಾತಿಯ ಅಣಬೆಗಳಿವೆಯಂತೆ. ಬಿಳಿಗಿರಿ ರಂಗನ ಬೆಟ್ಟದ ವ್ಯಾಪ್ತಿಯಲ್ಲಿ ಹತ್ತಾರು ಅಣಬೆ ಪ್ರಭೇದಗಳನ್ನು ಗುರುತಿಸಲಾಗಿದೆ. ಸೂಜಿ ಗಾತ್ರದಿಂದ ಹಿಡಿದು ಕೆಜಿ ತೂಕದ ಅಣಬೆಗಳು ಇಲ್ಲಿ ಬೆಳೆಯುವುದು ವಿಶೇಷ. ಕೆಲವು ಕೊಡೆಯಾಕಾರ ಪಡೆದರೆ, ಮತ್ತಲವು ತಟ್ಟೆಯಂತೆ ಹರಡಿಕೊಂಡಿರುತ್ತದೆ.
