ಉದಯವಾಹಿನಿ, ಕೋಲಾರ : ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪಾಲ್ಗೊಳ್ಳಿ, ರಾಜೀ ಮೂಲಕ ಶೀಘ್ರ ನ್ಯಾಯ ಪಡೆದುಕೊಳ್ಳಿ, ಸಮಯ,ಹಣ ಉಳಿಸಿ, ಸೌಹಾರ್ದತೆಯ ಜೀವನ ನಿಮ್ಮದಾಗಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎ.ಮಂಜುನಾಥ್ ಉಭಯ ಕಕ್ಷಿದಾರರಿಗೆ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕದಾಲತ್‌ಗೆ ಚಾಲನೆ ನೀಡಿ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವರ್ಷಕ್ಕೆ ನಾಲ್ಕು ರಾಷ್ಟ್ರೀಯ ಲೋಕ ಅದಾಲತ್ ನಡೆಸುತ್ತಿದ್ದು,ಇದು ಈ ವರ್ಷದ ೨ನೇ ಲೋಕ ಅದಾಲತ್ ಆಗಿದೆ ಎಂದು ತಿಳಿಸಿದರು.
ಕಳೆದ ಮಾ.೧೬ ರಂದು ನಡೆದ ಜನತಾ ನ್ಯಾಯಾಲಯದಲ್ಲಿ ೧೦,೯೬೦ ನ್ಯಾಯಾಲಯದಲ್ಲಿದ್ದ ಪ್ರಕರಣ, ೧೧,೦೧೩ ವ್ಯಾಜ್ಯ ಪೂರ್ವ ಪ್ರಕರಣ ಸೇರಿದಂತೆ ೨೧,೯೭೩ ಪ್ರಕರಣ ರಾಜೀ ಮೂಲಕ ಮುಕ್ತಾಯಗೊಂಡಿದ್ದು, ೩೫,೫೨,೨೪,೭೩೭ ರೂ ಪರಿಹಾರದ ಹಣ ಪಾವತಿಯಾಗಿದೆ ಎಂದು ತಿಳಿಸಿದ ಅವರು, ಈ ಬಾರಿ ಇನ್ನೂ ಹೆಚ್ಚಿನ ಪ್ರಕರಣಗಳು ರಾಜೀ ಮೂಲಕ ಇತ್ಯರ್ಥವಾಗುವ ಆಶಯ ವ್ಯಕ್ತಪಡಿಸಿದರು.
ಕೋಲಾರ ಸೇರಿದಂತೆ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಮುಳಬಾಗಿಲು, ಕೆಜಿಎಫ್ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮವಹಿಸಲಾಗಿದೆ ಎಂದರು.
ಉಭಯ ಪಕ್ಷಗಾರರು ಹಾಗೂ ಅವರ ವಕೀಲರು ಪೂರ್ವ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಜನಮನ್ನಣೆ ಪಡೆದಿರುವ ಪರ್ಯಾಯ ನ್ಯಾಯ ವಿತರಣೆಯಲ್ಲಿ ಉಭಯ ಪಕ್ಷಗಾರರು ತಮ್ಮ ಪ್ರಕರಣಗಳ ರಾಜಿ ಮಾಡಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!