ಉದಯವಾಹಿನಿ, ಬೆಂಗಳೂರು: ಸಂಚಾರ ದಟ್ಟಣೆ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ನಗರದ ಸುಮಾರು ೩ ಸಾವಿರ ಕಡೆಗಳಲ್ಲಿ ಹೆಚ್ಚುವರಿಯಾಗಿ ೭೫೦ ಕೃತಕ ಬುದ್ಧಿಮತ್ತೆ(ಎಐ) ಸ್ಮಾರ್ಟ್ ಕ್ಯಾಮರಾಗಳನ್ನು ಅಳವಡಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ನಗರದ ಹಲವು ಕಡೆಗಳಲ್ಲಿ ಸಂಚಾರ ನಿರ್ವಹಣೆಗೆ ಈಗಾಗಲೇ ನಗರದ ಹಲವೆಡೆ ೭,೫೦೦ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಹೆಚ್ಚುವರಿ ಕ್ಯಾಮರಾಗಳನ್ನು ನಗರದ ಹೊರವಲಯ ಮತ್ತು ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗುತ್ತದೆ. ಟ್ರಾಫಿಕ್ ನಿರ್ವಹಣೆಗೆ ನೆರವಾಗುವುದು, ಹಿಟ್ ಅಂಡ್ ರನ್ ಪ್ರಕರಣಗಳು, ಮಹಿಳೆಯರಿಗೆ ಕಿರುಕುಳ ಮತ್ತು ಇತರ ಕಾನೂನು ಸುವ್ಯವಸ್ಥೆ ಸಂಬಂಧಿತ ಘಟನೆಗಳ ಮೇಲೆ ನಿರಂತರವಾಗಿ ಕಣ್ಗಾವಲಿರಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಅಲ್ಲದೆ, ಸುರಕ್ಷಿತ ನಗರ ಯೋಜನೆಯ ಭಾಗವಾಗಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ೧೫೦ ವಾಚ್ ಟವರ್‌ಗಳು ಮತ್ತು ಎಂಟು ಹೈ ಡೆಫಿನಿಷನ್ ಫೇಸ್-ರೆಕಗ್ನಿಷನ್ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೈ-ಡೆಫಿನಿಷನ್ ಫೇಸ್-ರೆಕಗ್ನಿಷನ್ ಕ್ಯಾಮರಾಗಳು ಸಂಚಾರ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡಲಿವೆ. ವಾಚ್ ಟವರ್‌ಗಳು ಸಾರ್ವಜನಿಕ ಪ್ರದೇಶಗಳ ಸಮರ್ಪಕ ಚಿತ್ರಣ ಒದಗಿಸಲಿವೆ. ಜತೆಗೆ, ಅಧಿಕಾರಿಗಳು ಘಟನೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
