ಉದಯವಾಹಿನಿ, ಮೈಸೂರು: ಮೂಲಸೌಕರ್ಯ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಸಾವಿರಾರು ಮಂದಿ ಸೋಮವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.
ನಗರದ ಯರಗನಹಳ್ಳಿ ಬಡಾವಣೆಯಲ್ಲಿರುವ ಮೆಗಾ ಡೈರಿ ಮುಂಭಾಗದಿಂದ ಹೊರಟ ಜಾಥಾ ಟೆರೇಷಿಯನ್ ಕಾಲೇಜು ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಸಮಾವೇಶಗೊಂಡಿತು. ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು, ಮೈಸೂರು ಪೂರ್ವ ವಲಯ ವ್ಯಾಪ್ತಿಯ 30 ಬಡಾವಣೆಗಳಲ್ಲಿ ಇನ್ನೂ ಬಗೆಹರಿಯದ ವಿವಿಧ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾವು ಈಗಾಗಲೇ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೆ ಯಾವುದೇ ರೀತಿಯ ಆಶಾಭಾವನೆ ಕಂಡುಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಜಿಲ್ಲಾಧಿಕಾರಿ ಕಚೇರಿಗೆ ಬಹಳ ಹತ್ತಿರದಲ್ಲಿಯೇ ಇದ್ದೇವೆ ಎಂಬುದು ಒಂದು ಅಂಶವಾದರೆ, ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ನಮ್ಮ ವಲಯದ ಹಲವು ಬಡಾವಣೆಗಳು ಇವೆ ಎಂಬುದು ಗಮನಾರ್ಹ. ಇದನ್ನು ಮನಗಂಡು ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸುವತ್ತ ಮುತುವರ್ಜಿ ವಹಿಸುವರೆಂಬ ನಂಬಿಕೆ ಇದೆ ಎಂದರು.
ನಮ್ಮ ಆದ್ಯತೆಗಳ ಮೊದಲನೇ ಅಂಶವಾಗಿ ಕಾವೇರಿ ನೀರು ಸಂಪರ್ಕ ಕಲ್ಪಿಸಬೇಕು. ವಲಯ ವ್ಯಾಪ್ತಿಯ ಬಡಾವಣೆಗಳಲ್ಲಿ ಒಳಚರಂಡಿ ಮಾರ್ಗದ ನಿರ್ಮಾಣ ಮತ್ತು ಅನುಮೋದಿತ ರೇಖಾಚಿತ್ರಗಳ ಮಾನದಂಡದ ಪ್ರಕಾರ ಎಸ್‍ಟಿಪಿ ನಿರ್ಮಾಣ ಆಗಬೇಕು. ಹೊರ ವರ್ತುಲ ರಸ್ತೆ ಪಕ್ಕದಲ್ಲಿರವ ತಿಪ್ಪಯ್ಯನ ಕೆರೆಯಲ್ಲಿ ಚರಂಡಿ ನೀರು ಸಂಗ್ರಹವಾಗಿದ್ದು, ಈ ಭಾಗದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮಾತ್ರವಲ್ಲ, ಸುತ್ತಮುತ್ತಲಿನ ನಾಲ್ಕಾರು ಒಳಚರಂಡಿ ಮಾರ್ಗಗಳ ಕಲುಷಿತ ನೀರು ಕೆರೆಗೆ ಹರಿದುಬಂದು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಈ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಮೈಸೂರು ಪೂರ್ವವಲಯ ಬಡಾವಣೆಗಳ ಅಲ್ಲಲ್ಲಿ ಹಾದುಹೋಗಿರುವ ರಾಜಕಾಲುವೆಯ ಅಕ್ಕಪಕ್ಕಗಳಲ್ಲಿ ಹಲವು ಕಟ್ಟಡಗಳು ನಿರ್ಮಾಣವಾಗಿದ್ದು, ಮಳೆನೀರು ಮತ್ತು ಕೊಳಚೆ ನೀರು ಸೇರಿ ಕೊಳವೆ ಬಾವಿಗಳಿಗೆ ನುಗ್ಗಿ ವಿವಿಧ ರೀತಿಯ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿವೆ ಎಂದು ಹೇಳಿದರು.
