ಉದಯವಾಹಿನಿ, ಚಳ್ಳಕೆರೆ : ಜಮೀನು ವಿಚಾರವಾಗಿ ಮಾವ ಹಾಗೂ ಸೊಸೆ ನಡುವೆ ಜಗಳವಾಗಿ ಸೊಸೆ ಕೊಲೆಯಾಗಿರುವ ಘಟನೆ ಇಂದು ಬೆಳ್ಳಂ ಬೆಳಗ್ಗೆ ನಡೆದಿದೆ.ಈರಮ ಭೀಕರವಾಗಿ ಕೊಲೆಗೀಡಾಗಿರುವ ಮಹಿಳೆ. ಮಾವ ಚಂದ್ರಣ್ಣ ಕೊಲೆ ಮಾಡಿರುವ ಆರೋಪಿಯಾಗಿದ್ದು, ಜಮೀನು ವಿಚಾರಕ್ಕೆ ಜಗಳವಾಗಿ ಸೊಸೆಯ ಕೊಲೆಯಲ್ಲಿ ಅಂತ್ಯವಾಗಿದೆ.ಚಂದ್ರಣ್ಣ ಅವರ ತಮ್ಮನ ಹೆಂಡತಿಯಾದ ಈರಮಳ ಪತಿ ಇತ್ತೀಚಿಗೆ ಸಾವನ್ನಪ್ಪಿದ್ದು, ಆಸ್ತಿಯಲ್ಲಿ ಭಾಗ ಕೇಳಿದ್ದಕ್ಕೆ ಸೊಸೆ ಹಾಗೂ ಮಾವನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇಂದು ಬೆಳಿಗ್ಗೆ ಇದೇ ವಿಚಾರವಾಗಿ ಜಗಳವಾಗಿದೆ.
ಆ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕಿದ ಮಚ್ಚಿನಿಂದ ಈರಮ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಇವರ ಮನೆಯಲ್ಲಿ ಗಲಾಟೆ ಕೇಳಿ ನೆರೆಹೊರೆಯವರು ಮನೆ ಬಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಈರಮ ಕೊಲೆಯಾಗಿ ಬಿದ್ದಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಸುದ್ದಿ ತಿಳಿದು ಪರಶುರಾಂಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿ ಚಂದ್ರಣ್ಣನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
