ಉದಯವಾಹಿನಿ, ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಮುಂಗಾರು ಮಳೆಯಬ್ಬರ ಬುಧವಾರವೂ ಮುಂದುವರಿದಿದೆ. ಭಾರೀ ಮಳೆ, ಪ್ರವಾಹ ಹಾಗೂ ಗುಡ್ಡಕುಸಿತದಿಂದಾಗಿ ಉತ್ತರಕನ್ನಡ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಿರಾಶ್ರಿತರಾಗಿರುವ 2 ಸಾವಿರಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಅಂಕೋಲಾ- ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದ ಪ್ರಕರಣದಲ್ಲಿ ಇನ್ನೊಂದು ಅವಾಂತರ ಉಂಟಾಗಿದ್ದು, ಗುಡ್ಡ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ ಬಿದ್ದ ಪರಿಣಾಮ ನದಿ ಬದಿಯ ಉಳುವರೆ ಗ್ರಾಮಕ್ಕೂ ಭಾರೀ ಹಾನಿಯಾಗಿದೆ. ನೀರಿನ ರಭಸಕ್ಕೆ ಮೂರು ಮನೆಗಳು ನಾಶವಾಗಿ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಎನ್‌ಡಿಆರೆಫ್ ಹಾಗೂ ತಾಲೂಕು ಆಡಳಿತದಿಂದ ಮಹಿಳೆಗಾಗಿ ಶೋಧಕಾರ್ಯ ಆರಂಭವಾಗಿದೆ.
ಮನೆಯಲ್ಲಿದ್ದ ಸೀಥಿಗೌಡ (65) ಎಂಬ ವೃದ್ಧೆ ನಾಪತ್ತೆಯಾಗಿದ್ದಾರೆ. 14 ಜನರಿಗೆ ಗಾಯವಾಗಿದ್ದು, ಓರ್ವ ವ್ಯಕ್ತಿಯ ಸ್ಥೀತಿ ಚಿಂತಾಜನಕವಾಗಿದೆ. ಕಾರವಾರ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಬಳಿ ಗುಡ್ಡ ಉಂಟಾದ ಗುಡ್ಡ ಕುಸಿತದಿಂದ 9 ಜನ ಮಣ್ಣಿನಡಿ ಸಿಲುಕಿದ್ದಾರೆ ಎಂದು ಹೇಳಲಾಗಿತ್ತು. ಮಾಹಿತಿಯ ಪ್ರಕಾರ ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಗುಡ್ಡದ ಕೆಳಗಿದ್ದ 2 ಮನೆಗಳು ಮತ್ತೊಂದು ಟೀ ಸ್ಟಾಲ್ ಧ್ವಂಸಗೊಂಡಿವೆ. ಒಂದು ಮನೆಯಲ್ಲಿದ್ದ ಪೂರ್ತಿ ಕುಟುಂಬ ಬಲಿಯಾಗಿದ್ದಾರೆ. ಎನ್‌ಡಿಅರ್ ಎಫ್ ತಂಡದ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಇದುವರೆಗೆ 5 ಮೃತದೇಹಗಳು ಪತ್ತೆಯಾಗಿವೆ. ಮತ್ತೊಂದು ಮನೆಯಲ್ಲಿದ್ದ 7 ಜನರ ಪೈಕಿ ಒಬ್ಬ ವೃದ್ಧೆ ಮಾತ್ರ ಸಾವನ್ನಪ್ಪಿದ್ದಾರೆ ಉಳಿದವರು ಬಚಾವಾಗಿದ್ದಾರೆ.
