ಉದಯವಾಹಿನಿ, ಹಾವೇರಿ: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಗುದ್ದಿ ಲಕ್ಷ್ಮಿ ಕುಳನೂರು (38) ಎಂಬುವವರು ಮೃತಪಟ್ಟಿದ್ದು, ಬಸ್ ಚಾಲಕನ ವಿರುದ್ಧ ಹಾವೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಎಲ್‌ಐಸಿ ಬಸ್ ತಂಗುದಾಣ ಬಳಿಯ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಬುಧವಾರ ರಾತ್ರಿ ಈ ಅವಘಡ ಸಂಭವಿಸಿದೆ.
‘ಇಜಾರಿ ಲಕಮಾಪುರದ ನಿವಾಸಿ ಲಕ್ಷ್ಮಿ ಅವರು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಸಹಾಯಕಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು. ‘ವಾಲ್ಮೀಕಿ ವೃತ್ತಕ್ಕೆ ಬಂದಿದ್ದ ಮಹಿಳೆ, ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ದಾಟುತ್ತಿದ್ದರು. ಇದೇ ಸಂದರ್ಭದಲ್ಲಿ ಅತೀ ವೇಗದಲ್ಲಿ ಬಂದಿದ್ದ ಬಸ್ (ಹುಬ್ಬಳ್ಳಿ- ಹಾವೇರಿ ತಡೆರಹಿತ), ಲಕ್ಷ್ಮಿ ಅವರಿಗೆ ಡಿಕ್ಕಿ ಹೊಡೆದಿತ್ತು. ತಲೆಗೆ ತೀವ್ರ ಪೆಟ್ಟಾಗಿ ಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
