ಉದಯವಾಹಿನಿ, ಬೆಂಗಳೂರು: ವೇಗ, ಸಂಚಾರ ನಿಯಮ ಉಲ್ಲಂಘನೆ, ಹೆಚ್ಚುತ್ತಿರುವ ಅಪಘಾತಗಳ ಹಿನ್ನಲೆಯಲ್ಲಿ ನೈಸ್ ರಸ್ತೆಯಲ್ಲಿ ಆಟೋಮೆಟಿಕ್ ನಂಬರ್‌ಪ್ಲೇಟ್ ರೆಕಗ್ನೈಜೇಷನ್ ಕ್ಯಾಮರಾ (ಎಎನ್‌ಪಿಆರ್) ಹಾಗೂ ಸ್ಪೀಡ್ ರಾಡರ್ ಗನ್ಸ್ ಅಳವಡಿಸಲು ರಾಜ್ಯ ರಸ್ತೆ ಹಾಗೂ ಸುರಕ್ಷತೆ ಇಲಾಖೆ ತೀರ್ಮಾನಿಸಿದೆ.
ಈ ಕ್ಯಾಮರಾಗಳ ಅಳವಡಿಕೆಯಿಂದ ನಿಗದಿತ ಮಿತಿಗಿಂತ ಹೆಚ್ಚು ವೇಗವಾಗಿ ವಾಹನ ಚಲಾಯಿಸಿದರೆ ಅಥವಾ ಇನ್ನಿತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಸುಲಭವಾಗಿ ಪತ್ತೆ ಹಚ್ಚಬಹುದು
ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬಹುದು. ಈ ಮೂಲಕ ನೈಸ್ ರಸ್ತೆಯಲ್ಲಿ ಅಪಘಾತ ಪ್ರಮಾಣವನ್ನು ಇಳಿಸಲು ಇಲಾಖೆ ಮುಂದಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಎಎನ್‌ಪಿಆರ್ ಕ್ಯಾಮರಾಗಳನ್ನು ಇಲಾಖೆ ಅಳವಡಿಸಲಿದೆ.
ಕಳೆದ ಮೂರು ದಿನಗಳ ಹಿಂದೆ ನೈಸ್ ರಸ್ತೆಯಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದರು.
ವೇಗದ ವಾಹನ ಚಾಲನೆ, ರಸ್ತೆಪಥ ಉಲ್ಲಂಘನೆ ಹಾಗೂ ಚಾಲನೆಯ ವೇಳೆ ಮೊಬೈಲ್ ಬಳಕೆಯಿಂದಾಗಿ ಹೆಚ್ಚು ಅಪಘಾತವಾಗುತ್ತಿದೆ. ಕಳೆದ ಆರು ತಿಂಗಳಲ್ಲಿ ೬೫ ಅಪಘಾತ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ೧೩ ಮಂದಿ ಸಾವನ್ನಪ್ಪಿದ್ದಾರೆ. ೨೦೨೩ರಲ್ಲಿ ನಡೆದಿದ್ದ ೧೨೦ ಅಪಘಾತ ಪ್ರಕರಣಗಳಲ್ಲಿ ೩೭ ಮಂದಿ ಸಾವನ್ನಪ್ಪಿದರೆ, ೨೦೨೨ರಲ್ಲಿ ೧೧೧ ಪ್ರಕರಣಗಳಲ್ಲಿ ೪೨ ಮಂದಿ ಮೃತಪಟ್ಟಿರುವುದಾಗಿ ಸಂಚಾರ ಇಲಾಖೆಯ ಅಂಕಿ-ಅಂಶಗಳು ತಿಳಿಸುತ್ತವೆ.ಈಗಾಗಲೇ ಬೆಂಗಳೂರು-ಮೈಸೂರು ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದ ಹೆದ್ದಾರಿಗಳಲ್ಲಿ ಇಂಥ ಕ್ಯಾಮರಾಗಳನ್ನು ಅಳವಡಿಸಿದ್ದು, ಅಪಘಾತ ಇಳಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!