ಉದಯವಾಹಿನಿ, ಬೆಂಗಳೂರು: ಉತ್ತರಕನ್ನಡ ಅಂಕೋಲ ಬಳಿಯ ಶಿರೂರು ಬಳಿ ಗುಡ್ಡ ಕುಸಿದು ನದಿಯಲ್ಲಿ ಕೊಚ್ಚಿ ಹೋಗಿ ಏಳು ಮಂದಿ ಮೃತಪಟ್ಟು ಅಪಾರ ಹಾನಿ ಉಂಟಾಗಿದೆ. ಸಂತ್ರಸ್ತರು ಅತಂತ್ರ ಸ್ಥಿತಿಯಲ್ಲಿದ್ದರೆ, ಇತ್ತ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಶಿರೂರಿನ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಭೂಕುಸಿತದಿಂದ ಜೀವಹಾನಿಗಳಾಗಿ ಶವಗಳನ್ನು ಹೊರತೆಗೆಯುವ ಕಾರ್ಯದಲ್ಲಿ ರಾಜ್ಯ ಸರ್ಕಾರ ತೊಡಗಿದೆ. ತಮ ಪ್ರಾಣ ಪಣಕ್ಕಿಟ್ಟು ಜಿಲ್ಲಾಡಳಿತ ಹಾಗೂ ಸಿಬ್ಬಂದಿ ಮೃತದೇಹಗಳಿಗಾಗಿ ಕಾರ್ಯಾಚರಣೆಯಲ್ಲಿ ಹಗಲಿರುಳು ತೊಡಗಿದ್ದಾರೆ.
ಈ ಭಾಗದಲ್ಲಿ ಸತತ ಮಳೆ ಸುರಿಯುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದ್ದರೂ ಸಹ ತಮ ಪ್ರಾಣವನ್ನು ಲೆಕ್ಕಿಸದೆ ಸ್ಥಳೀಯರ ನೆರವಿಗಾಗಿ ಧಾವಿಸಿದ್ದಾರೆ. ಮಳೆ ಜೋರಾಗಿ ಮತ್ತೆ ಗುಡ್ಡ, ಜೆಸಿಬಿಯೂ ಕುಸಿಯುವ ಆತಂಕದಲ್ಲಿ ರಾಜ್ಯ ಸರ್ಕಾರ ತಮ ಜವಾಬ್ದಾರಿಯನ್ನು ಮರೆಯದೆ ಪರಿಸ್ಥಿತಿ ಸರಿದೂಗಿಸಲು ಯತ್ನಿಸುತ್ತಿದೆ. ಆದರೆ ಇತ್ತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ರಸ್ತೆ ಮಧ್ಯೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತೇವೆ. ಮೊದಲು ರಸ್ತೆ ಕ್ಲಿಯರ್‌ ಆಗಬೇಕೆಂದು ಒತ್ತಡ ಹಾಕುತ್ತಿದ್ದಾರೆ.
ಒಂದು ವೇಳೆ ಈ ಮಣ್ಣಿನಡಿ ಯಾರಾದರೂ ಸಿಲುಕಿಕೊಂಡಿದ್ದರೆ ಮಣ್ಣು ತೆರವು ವೇಳೆ ಜೆಸಿಬಿ ತಾಗಿದರೆ ಎಂಬ ಆತಂಕ ಜಿಲ್ಲಾಡಳಿತದ್ದು, ಹಾಗಾಗಿ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಘರ್ಷದಿಂದ ಅಲ್ಲಿನ ಸ್ಥಳೀಯರು ಪರದಾಡುವಂತಾಗಿದ್ದಾರೆ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಮನಸೋ ಇಚ್ಛೆ ಗುಡ್ಡ ಕೊರೆದು ರಸ್ತೆ ನಿರ್ಮಿಸಿರುವುದೇ ಇಂದಿನ ಅನಾಹುತಕ್ಕೆ ಕಾರಣವಾಗಿದೆ ಎಂಬುದು ರಾಜ್ಯ ಸರ್ಕಾರದ ಆರೋಪವಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ಶಿರೂರು ಅನಾಹುತಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Leave a Reply

Your email address will not be published. Required fields are marked *

error: Content is protected !!