ಉದಯವಾಹಿನಿ, ಮುಳಗುಂದ: ಇಲ್ಲಿನ ವಾರದ ಸಂತೆ ನಡೆಯುವ ಎಪಿಎಂಸಿ ಆವರಣ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಆಗದಿರುವುದರಿಂದ ಮಳೆಗಾಲದಲ್ಲಿ ಕೃಷಿಕರಿಗೆ, ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಪಟ್ಟಣ ಬೆಳೆದಂತೆ ಮುಖ್ಯ ರಸ್ತೆಗಳು ಕಿರಿದಾದ ಪರಿಣಾಮ 2012ರಲ್ಲಿ ವಾರದ ಸಂತೆ ಸ್ಥಳವನ್ನು ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡಲಾಗಿದೆ.
ಅಂದಿನಿಂದ ಸಂತೆ ಇಲ್ಲಿಯೇ ನಡೆಯುತ್ತಿದೆ. ಸಂತೆ ದಿನ ತರಕಾರಿ ವ್ಯಾಪಾರಸ್ಥರಿಗೆ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮತ್ತು ಸ್ವಚ್ಛತೆ ನಿರ್ವಹಣೆಯನ್ನು ಸ್ಥಳೀಯ ಪಟ್ಟಣ ಪಂಚಾಯ್ತಿ ನಿರ್ವಹಣೆ ಮಾಡುತ್ತಿದೆ. ಗದಗ ಎಪಿಎಂಸಿ ವತಿಯಿಂದ 2020ರಲ್ಲಿ ಶೆಡ್‌ ಮತ್ತು ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ, ಅದು ಅವೈಜ್ಞಾನಿಕವಾಗಿರುವ ಪರಿಣಾಮ ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸಿದೆ. ಪರಿಣಾಮ ವ್ಯಾಪಾರಿಗಳು, ಸಂತೆಗೆ ಬರುವ ಗ್ರಾಹಕರಿಗೆ ಕಿರಿ ಕಿರಿ ತಪ್ಪದಾಗಿದೆ.
ಎಪಿಎಂಸಿ ಆವರಣ ಮತ್ತು ಗೇಟ್ ಬಳಿ ಮಳೆ ನೀರು ಹೊರ ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ್ದಕ್ಕೆ ಮಳೆಗಾಲದಲ್ಲಿ ನೀರು ನಿಂತು ದುರ್ನಾತ, ಸೊಳ್ಳೆ ಉತ್ಪತ್ತಿಯಾಗಿ ವ್ಯಾಪಾರಿಗಳು, ಗ್ರಾಹಕರಿಗೆ ತೊಂದರೆ ಎದುರಾಗುತ್ತಿದೆ. ಹೊರಭಾಗದಲ್ಲೂ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.
ಎಪಿಎಂಸಿ ಆವರಣವು ವಿಶಾಲವಾಗಿದ್ದು, ಒಂದು ಭಾಗದಲ್ಲಿ ಎರಡು ಶೆಡ್‌ಗಳಿವೆ. ಇನ್ನೊಂದು ಭಾಗದಲ್ಲಿ ಖಾಲಿ ಜಾಗವಿದ್ದು ಅಲ್ಲಿ ಕೂಡ ಶೆಡ್‌ ಹಾಗೂ ಹೊರಭಾಗದಲ್ಲಿ ಚರಂಡಿ ನಿರ್ಮಾಣ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಲ್ಲಿನ ರೈತ ಸಂಘ ಮನವಿ ಮಾಡಿತ್ತು. ಆದರೆ, ಗದಗ ಎಪಿಎಂಸಿ ಸಮಿತಿ ಮಾತ್ರ ಈವರೆಗೂ ನಿರ್ಲಕ್ಷ್ಯ ವಹಿಸಿದೆ.

Leave a Reply

Your email address will not be published. Required fields are marked *

error: Content is protected !!