ಉದಯವಾಹಿನಿ, ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ರೈಸ್ ಸಂಸ್ಥೆಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿನ ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎಂದು ಆಡಳಿತ ಪಕ್ಷವು ಸೇರಿದಂತೆ ಎಲ್ಲಾ ಶಾಸಕರು ಪಕ್ಷಬೇಧ ಮರೆತು ಸಮಾಜ ಕಲ್ಯಾಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಶಾಸಕಿ ರೂಪಕಲಾ, ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳ ಲೋಪಗಳನ್ನು ವಿವರಿಸಿದರು. ಸಿಬ್ಬಂದಿಗಳ ಕೊರತೆ, ಶೈಕ್ಷಣಿಕ ವಾತಾವರಣ, ಸುರಕ್ಷತೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ ಎಂದು ಸದನದ ಗಮನಕ್ಕೆ ತಂದರು. ಬೇಡಿಕೆಗೆ ಅನುಸಾರವಾಗಿ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶ ಇಲ್ಲ ಎಂಬ ವಿಚಾರವನ್ನು ವಿವರಿಸಿದರು. ಕ್ರೈಸ್ ಸಂಸ್ಥೆಯ ಶಾಲೆಗಳಿಗೆ ಮುರಾರ್ಜಿ ವಸತಿ ಶಾಲೆಯ ನಿರ್ವಹಣೆಗೆ ನೀಡುವಷ್ಟೇ ಅನುದಾನ ನೀಡಲಾಗುತ್ತಿದೆ. ಆದರೂ ಗುಣಮಟ್ಟದಲ್ಲಿ ಸಮಾಜ ಕಲ್ಯಾಣ ಶಾಲೆಗಳು ಕಳಪೆಯಾಗಿವೆ ಎಂದು ಆರೋಪಿಸಿದರು. ಇಲಾಖೆಯ ಉಪನಿರ್ದೇಶಕರೆ ಗುತ್ತಿಗೆದಾರರಾಗಿದ್ದಾರೆ. ಸಮುದಾಯ ಭವನಗಳ ನಿರ್ಮಾಣಕ್ಕೆ ವರ್ಷಕ್ಕೆ 1,300 ಕೋಟಿ ಖರ್ಚು ಮಾಡಲಾಗುತ್ತಿದೆ. ಶೋಷಿತರ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದನ್ನು ಸರ್ಕಾರ ರೂಢಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರ ಪರವಾಗಿ ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಇತ್ತೀಚಿಗೆ ನಡೆದ ಎಸ್‌ಸಿಪಿ ಮತ್ತು ಟಿಎಸ್ ಪಿ ಪರಿಷತ್ ಸಭೆಯಲ್ಲಿ ಕ್ರೈಸ್ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಅನುದಾನ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಹಾಸ್ಟೆಲ್ ಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಆರೋಗ್ಯ ವಿಚಾರದಲ್ಲಿ ರಾಜಿ ಇಲ್ಲ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ 68 ಭಾರತ ರತ್ನ ಡಾ. ಬಿಆರ್ ಅಂಬೇಡ್ಕರ್ ಸರ್ಕಾರಿ ವಸತಿ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ, ಇಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 8500 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಂಜೂರಾತಿ ಇದೆ.
