ಉದಯವಾಹಿನಿ, ಬೆಂಗಳೂರು: ವಿಧಾನಪರಿಷತ್ನ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಛಲವಾದಿ ನಾರಾಯಣಸ್ವಾಮಿಯವರ ಹೆಸರನ್ನು ಸಭಾಪತಿ ಬಸವರಾಜ ಹೊರಟ್ಟಿಯವರು ಅಧಿಕೃತವಾಗಿ ಸದನದಲ್ಲಿ ಪ್ರಕಟಿಸಿದರು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಯವರು ನಾರಾಯಣಸ್ವಾಮಿಯವರ ಹೆಸರನ್ನು ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅವರನ್ನು ಕರೆತಂದು ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸಿದರು.
ನಂತರ ಛಲವಾದಿ ನಾರಾಯಣಸ್ವಾಮಿಯವರಿಗೆ ಸಚಿವರು ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ಸದಸ್ಯರು ಪಕ್ಷಭೇದ ಮರೆತು ಅಭಿನಂದನೆ ಸಲ್ಲಿಸಿದರು. ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಪ್ರಜಾಪ್ರಭುತ್ವದ ಸೌಂದರ್ಯ ಮತ್ತೆ ಮರುಕಳಿಸಿದೆ ಎಂಬುದಕ್ಕೆ ನಾರಾಯಣಸ್ವಾಮಿಯವರ ಆಯ್ಕೆಯೇ ನಿದರ್ಶನ.
ಪ್ರತಿಯೊಂದು ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕೆಂಬುದು ಸಂವಿಧಾನದ ಆಶಯ. ತಳಸಮುದಾಯದಿಂದ ಬಂದಿರುವ ಅವರಿಗೆ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಇದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ. ಚಿಂತಕರ ಚಾವಡಿ ಎಂದು ಕರೆಯುವ ಮೇಲನೆಯಲ್ಲಿ ಇನ್ನಷ್ಟು ಗುಣಮಟ್ಟದ ಚರ್ಚೆಯಾಗಲಿ. ಸರ್ಕಾರ ತಪ್ಪುದಾರಿಯಲ್ಲಿ ನಡೆದಾಗ ಸರಿದಾರಿಗೆ ತರುವ ಕೆಲಸವನ್ನು ಮಾಡಲಿ ಎಂದು ಆಶಿಸಿದರು. ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ನಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಪಕ್ಷದ ನಾಯಕರನ್ನು ಛಾಯಾ ಮುಖ್ಯಮಂತ್ರಿ ಎಂದು ಕರೆಯುತ್ತಾರೆ.
ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಂಡಿ ಎಚ್ಚರಿಸುವ ಕೆಲಸ ವಿರೋಧಪಕ್ಷದ ನಾಯಕರಿಂದ ಆಗಬೇಕು. ಕರ್ನಾಟಕದ ವಿಧಾನಪರಿಷತ್ಗೆ ಶತಮಾನಗಳ ಇತಿಹಾಸವಿದೆ. ಹಿಂದೆ ಮೈಸೂರು ರಾಜರ ಆಡಳಿತದಲ್ಲಿ ಈ ವ್ಯವಸ್ಥೆ ಇತ್ತು. ಈಗ ಅದನ್ನು ನಾವೂ ಕೂಡ ಅಳವಡಿಸಿಕೊಂಡಿದ್ದೇವೆ ಎಂದರು. ವಿರೋಧಪಕ್ಷದ ನಾಯಕರು ಸರ್ಕಾರಕ್ಕೆ ನಿರಂತರವಾಗಿ ಎಚ್ಚರಿಕೆ ಕೊಡುವ ಕೆಲಸ ಮಾಡಲಿ. ಒಳ್ಳೆಯ ಕೆಲಸ ಮಾಡಿದಾಗ ಹೊಗಳಬೇಕು, ತಪ್ಪು ಮಾಡಿದಾಗ ಕಿವಿ ಹಿಂಡುವ ಕೆಲಸ ಮಾಡಲಿ. ಆದರೆ ವಿರೋಧಕ್ಕಾಗಿ ವಿರೋಧಿಸುವುದು ಬೇಡ ಎಂದು ಮನವಿ ಮಾಡಿದರು.
