ಉದಯವಾಹಿನಿ, ಬೆಂಗಳೂರು: ಹಿಂದೂ ಮುಖಂಡರ ಕೊಲೆಗೈದು ಭಯೋತ್ಪಾದನೆಗೆ ಸಂಚು ರೂಪಿಸಿ ಶಸ್ತ್ರಾಸ್ತ್ರ,ಮದ್ದುಗುಂಡುಗಳ ಸಂಗ್ರಹ ಪ್ರಕರಣದ ಆರೋಪಿ ಡಾ.ಸಬೀಲ್ ಅಹಮದ್ ಅಲಿಯಾಸ್ ಮೋಟು ಡಾಕ್ಟರ್ ನನ್ನು ಪ್ರಕರಣದಿಂದ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ.
ಆರೋಪಿ ಸಬೀಲ್ ಅಹಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜಿ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯ ಪೀಠವು ಮೋಟು ಡಾಕ್ಟರ್ ನನ್ನು ಪ್ರಕರಣದಿಂದ ಕೈಬಿಡಲು ನಿರಾಕರಣೆ ಮಾಡಿ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲರು, ನಮ್ಮ ಕಕ್ಷಿದಾರರ ವಿರುದ್ಧ ಬೆಂಗಳೂರಿನ ಪ್ರಕರಣದಲ್ಲಿ ಹೊರಿಸಲಾಗಿರುವ ಆರೋಪಗಳು ಮತ್ತು ಈ ಹಿಂದೆ ದೆಹಲಿಯಲ್ಲಿನ ಪ್ರಕರಣವೊಂದರಲ್ಲಿ ಹೊರಿಸಲಾದ ಆರೋಪಗಳೆರಡೂ ಒಂದೇ ರೀತಿ ಇವೆ. ದೆಹಲಿಯ ಪ್ರಕರಣದಲ್ಲಿ ಈಗಾಗಲೇ ದೋಷಮುಕ್ತಗೊಂಡಿದ್ದಾರೆ. ಹೀಗಾಗಿ ಏಕರೂಪದ ಆರೋಪಗಳಿಗೆ ಎರಡೆರಡು ಬಾರಿ ಸಿಆರ್‌ಪಿಸಿ ಅಡಿಯಲ್ಲಿ ವಿಚಾರಣೆ ನಡೆಸುವುದು ಕಾನೂನುಬಾಹಿರ ಎಂದು ವಾದ ಮಂಡಿಸಿದರು.
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಪಿ.ಪ್ರಸನ್ನಕುಮಾರ್, ದೆಹಲಿ ಪ್ರಕರಣದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸಿದ ಆರೋಪವಿದೆ. ಆದರೆ, ಬೆಂಗಳೂರು ಪ್ರಕರಣದಲ್ಲಿ ಹಲವರ ಹತ್ಯೆ ನಡೆಸಿ ಭಯೋತ್ಪಾದನೆ ಉಂಟುಮಾಡುವ ಉದ್ದೇಶವಿದ್ದ ಆರೋಪವಾಗಿದೆ. ಎರಡೂ ಭಿನ್ನವಾಗಿರುವುದರಿಂದ ಪ್ರಕರಣ ರದ್ದು ಮಾಡಬಾರದು.ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು, ಅರ್ಜಿದಾರನ ವಿರುದ್ಧ ಬೆಂಗಳೂರು ಮತ್ತು ದೆಹಲಿಯ ಪ್ರಕರಣದಲ್ಲಿ ದಾಖಲಾಗಿರುವುದು ಒಂದೇ ಕಾಯ್ದೆಯ ಸೆಕ್ಷನ್‌ಗಳಿರಬಹುದು. ಆದರೆ, ಅದು ಒಂದೇ ರೀತಿಯ ಆರೋಪಗಳಲ್ಲ. ಎರಡೂ ಪ್ರಕರಣಗಳು ವಾಸ್ತವವಾಗಿ ವಿಭಿನ್ನವಾಗಿವೆ ಮತ್ತು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
