ಉದಯವಾಹಿನಿ, ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮಗಳು ನಡೆಯದೇ ಇದ್ದರೂ ತಮ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಮತ್ತು ಜೆಡಿಎಸ್ ಹುನ್ನಾರ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ವಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಸುಳ್ಳು ಮಾಹಿತಿಯೊಂದಿಗೆ ಜನರನ್ನು ದಾರಿ ತಪ್ಪಿಸಿ ಅಪಪ್ರಚಾರ ಮಾಡುತ್ತಿವೆ ಎಂದು ಕಿಡಿಕಾರಿದರು.
ಭೂಮಿಯ ಮೂಲ ಒಡೆತನ ಹರಾಜು ಮೂಲಕ ಖರೀದಿ ಮಾಡಿದ್ದಾಗಿದ್ದು, ದೇವರಾಜ ಅವರಿಂದ ತಮ ಭಾವಮೈದುನ ಕಾನೂನುಬದ್ಧವಾಗಿ ಖರೀದಿ ಮಾಡಿದ್ದಾರೆ. ಹೀಗಾಗಿಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಭೂಮಿ ಬರುವುದಿಲ್ಲ.ನಿಂಗ ಅವರ ಕುಟುಂಬದ ಸದಸ್ಯರು ಒಪ್ಪಿಗೆಯೊಂದಿಗೆ ದೇವರಾಜ ಅವರಿಗೆ ಭೂಮಿಯ ಮಾಲಿಕತ್ವ ದಕ್ಕಿದೆ. ಹೀಗಾಗಿ ಈಗ ಮಂಜುನಾಥಸ್ವಾಮಿಯವರಿಂದ ಬಿಜೆಪಿಯವರು ದೂರು ಕೊಡಿಸಿ ಮನೆಮುರುಕ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ವಿವರಣೆ ಕೇಳಿದರೆ ಸರ್ಕಾರ ವರದಿ ನೀಡಲು ಸಿದ್ಧವಿದೆ ಎಂದು ಹೇಳಿದ ಮುಖ್ಯಮಂತ್ರಿಯವರು ಮುಡಾದಲ್ಲಿ ವಿರೋಧಪಕ್ಷಗಳ ಬೇರೆ ಬೇರೆ ನಾಯಕರು ಪಡೆದಿರುವ ನಿವೇಶನಗಳ ಮಾಹಿತಿಗಳನ್ನು ಬಹಿರಂಗಪಡಿಸಿದರು.
