ಉದಯವಾಹಿನಿ, ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಚನ್ನಸಂದ್ರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ‘ಬೃಹತ್ ಉದ್ಯೋಗ ಮೇಳವನ್ನು’ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಉದ್ಯೋಗ ಮೇಳಗಳನ್ನು ಸದುಪಯೋಗ ಪಡಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಇಲ್ಲಿಗೆ ಆಗಮಿಸಿದ್ದು ಬಹಳ ಸಂತೋಷ,ನಮ್ಮ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ೫ ನೇ ಉದ್ಯೋಗ ಮೇಳವಾಗಿದೆ.
ಖಾಸಗಿ ಕಂಪನಿಗಳಲ್ಲಿ ನಮ್ಮ ಅನೇಕ ಯುವಕರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡಬೇಕು ಎನ್ನುವ ಸದುದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಇದೊಂದು ವೇದಿಕೆ ಮಾತ್ರ, ಉದ್ಯೋಗ ಮಾಡುವವರು ಮತ್ತು ಉದ್ಯೋಗ ಕೊಡುವವರು ಇಲ್ಲಿ ಸೇರಿದ್ದೀರಿ. ಈ ಉದ್ಯೋಗ ಮೇಳದಲ್ಲಿ ಸುಮಾರು ೭೦ ಕಂಪನಿಗಳು ಭಾಗವಹಿಸಿದ್ದು, ಅವರಿಗೆ ಸೂಕ್ತವಾಗುವಂತಹ ಅರ್ಹ ಅಭ್ಯರ್ಥಿಗಳನ್ನು ಅವರು ಆಯ್ಕೆ ಮಾಡುತ್ತಾರೆ. ಅದೇ ರೀತಿ ಉದ್ಯೋಗ ಆಕಾಂಕ್ಷಿಗಳು ತಮ್ಮ ಅರ್ಹತೆಗೆ ತಕ್ಕಂತಹ ಕೆಲಸವನ್ನು ಆಯ್ಕೆ ಮಾಡಬಹುದಾಗಿದೆ. ನಾವು ಕೇವಲ ವೇದಿಕೆಯನ್ನು ನಿರ್ಮಾಣ ಮಾಡಿದ್ದೇವೆ. ೭ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಇಲ್ಲಿ ೨,೦೦೦ ಕ್ಕೂ ಹೆಚ್ಚು ಉದ್ಯೋಗವಾಕಾಶಗಳಿವೆ. ವಿಶೇಷವಾಗಿ ಪ್ಯಾಕಿಂಗ್ ಸೆಕ್ಟರ್, ಐಟಿ ಸೆಕ್ಟರ್, ಮೆಡಿಕಲ್ ಸೆಕ್ಟರ್ ನಲ್ಲಿ ಉದ್ಯೋಗಾವಕಾಶಗಳಿವೆ. ನಮ್ಮ ಮಹದೇವಪುರ ವಿಧಾನಸಭಾ ಕ್ಷೇತ್ರ ಸಿಲಿಕಾನ್ ವ್ಯಾಲಿ, ಇಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳಿವೆ ಮತ್ತು ಸಾಫ್ಟ್‌ವೇರ್ ಕಂಪನಿಗಳು ಇರುವುದರಿಂದ ಅದಕ್ಕೆ ಸಂಬಂಧಪಟ್ಟಂತಹ ಅನೇಕ ವಾಣಿಜ್ಯ ವ್ಯವಹಾರಗಳು ನಡೆಯುತ್ತಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಉದ್ಯೋಗ ಮೇಳದ ಮುಖ್ಯ ಸಂಯೋಜಕಾರ ಕಿರಣ್, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಶೆಟ್ಟಿ,ಕ್ಷೇತ್ರದ ಅಧ್ಯಕ್ಷರಾದ ಮನೋಹರೆಡ್ಡಿ,ನಟರಾಜ್,ಮುಖಂಡರಾದ ಪಾಪಣ್ಣ, ವೆಂಕಟಸ್ವಾಮಿರೆಡ್ಡಿ, ಮಹೇಂದ್ರ ಮೋದಿ,ಚನ್ನಸಂದ್ರ ಚಂದ್ರಶೇಖರ್, ಎಲ್.ರಾಜೇಶ್, ಕಿತ್ತಗನೂರು ಶ್ರೀನಿವಾಸ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!