ಉದಯವಾಹಿನಿ,ಕೊಪ್ಪಳ: ‘ಸಾಧನೆಯ ತುಡಿತ ಹೊಂದಿರುವವರಿಗೆ ಯಶಸ್ಸು ಎಂದರೇನು ಎನ್ನುವುದು ನಿಖರವಾಗಿ ಗೊತ್ತಿರಬೇಕು. ಬದುಕಿನಲ್ಲಿ ಯಶಸ್ಸಿನ ಅರ್ಥವೇ ಗೊತ್ತಿಲ್ಲವಾದರೆ ಯಾವ ಸಾಧನೆಯೂ ಸಾಧ್ಯವಾಗುವುದಿಲ್ಲ’ ಎಂದು ಸಾಧನಾ ಅಕಾಡೆಮಿಯ ನಿರ್ದೇಶಕ ಮಂಜುನಾಥ ಬಿ. ಹೇಳಿದರು.ತಮ್ಮ ಎರಡು ತಾಸಿನ ಮಾತಿನಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಸಾಧನೆಗೆ ಪ್ರೇರಣೆ ತುಂಬಿ ಯಶಸ್ಸಿನ ಮೆಟ್ಟಿಲು ಹೇಗೆ ಏರಬೇಕು ಎನ್ನುವುದನ್ನು ಅವರು ಹೇಳಿಕೊಟ್ಟರು.’ಯಾರಿಗೆ ಯಾವುದು ಬೇಕಾಗಿದೆಯೊ ಅಥವಾ ಬೇಕಿನಿಸುತ್ತದೆಯೊ ಅದನ್ನು ಪಡೆದುಕೊಳ್ಳುವುದೇ ಯಶಸ್ಸು’ ಎಂದು ವ್ಯಾಖ್ಯಾನಿಸಿದರು.
’20 ವರ್ಷ ಶಾಲಾ, ಕಾಲೇಜುಗಳಲ್ಲಿ ಓದಿದ ಬಳಿಕವೂ ಬದುಕಿನ ಗಮ್ಯದ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಇಂಗ್ಲಿಷ್ ಗೊತ್ತಿಲ್ಲ, ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ, ಇದು ನಮ್ಮಿಂದ ಸಾಧ್ಯವಿಲ್ಲ ಎನ್ನುವ ನಕಾರಾತ್ಮಕ ಮನೋಭಾವನೆಯಿಂದ ಹೊರಬಂದು ನಾನಿದನ್ನು ಮಾಡಬಲ್ಲೆ ಎಂದು ದೃಢವಾಗಿ ಹೇಳುವ ಆತ್ಮಬಲ ಬೇಕು. ವಯಸ್ಸು ಇದ್ದಾಗ ಸಾಧನೆಗೆ ಮನಸ್ಸು ಮಾಡುವುದಿಲ್ಲ. ಸಾಧನೆಗೆ ಮನಸ್ಸು ಮಾಡಿದಾಗ ವಯಸ್ಸು ಇರುವುದಿಲ್ಲ. ಹೀಗಾಗಬಾರದು’ ಎಂದರು.
‘ಸಾಧನೆಯ ಹಾದಿಯಲ್ಲಿ ಒಳ್ಳೆಯ ನಡತೆ, ಉತ್ತಮ ಮೌಲ್ಯ ಸಂಪಾದಿಸಬೇಕು. ಹಣವೂ ಬೇಕು. ಜೀವನದಲ್ಲಿ ಏನಾದರೂ ಗಳಿಸಿಕೊಳ್ಳಲು ಒಂದಷ್ಟು ಕಳೆದುಕೊಳ್ಳಬೇಕಾಗುತ್ತದೆ. ಸ್ಪರ್ಧಾತ್ಮಕ ಸವಾಲಿನಲ್ಲಿ ಕೌಶಲವಿಲ್ಲದಿದ್ದರೆ ಯಾವ ಸಾಧನೆಯೂ ಸಾಧ್ಯವಿಲ್ಲ. ನಮ್ಮ ಸಾಧನೆಯ ಓಟದಲ್ಲಿ ಇನ್ನೊಬ್ಬರನ್ನು ತುಳಿಯುವ ಕೆಲಸ ಮಾಡಬಾರದು’ ಎಂದು ಕಿವಿಮಾತು ಹೇಳಿದರು.
