ಉದಯವಾಹಿನಿ, ಬೆಂಗಳೂರು: ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ ಎಂದು ಪುನರುಚ್ಚರಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರಾಜ್ಯಸರ್ಕಾರ ಆಧಾರ ರಹಿತ ಅಂಕಿಅಂಶಗಳನ್ನು ನೀಡಿ ತಪ್ಪು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ತಮ ಪತ್ರಿಕಾಗೋಷ್ಠಿಯುದ್ದಕ್ಕೂ ಹಿಂದಿನ ಯುಪಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ನೀಡಿರುವ ಅಂಕಿ ಅಂಶಗಳನ್ನು ದಾಖಲೆಗಳ ಸಮೇತ ವಿವರ ನೀಡಿದ ನಿರ್ಮಲಾ ಸೀತಾರಾಮನ್‌, ರಾಜ್ಯಸರ್ಕಾರ ಅರೆಬೆಂದ ದಾಖಲೆಗಳನ್ನು ಮುಂದಿಟ್ಟುಕೊಂಡು ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕ ಮಾತ್ರವಲ್ಲದೆ ಯಾವುದೇ ರಾಜ್ಯಕ್ಕೂ ನಾವು ಅನ್ಯಾಯ ಮಾಡಿಲ್ಲ. ಆಯಾ ರಾಜ್ಯಗಳಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಅನುದಾನವನ್ನು ನೀಡಿದ್ದೇವೆ. ಯಾವುದೇ ರೀತಿಯ ತಾರತಮ್ಯವೆಸಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದಿನ ಯುಪಿಎ ಸರ್ಕಾರ ಕರ್ನಾಟಕಕ್ಕೆ ಎರಡು ಅವಧಿಯಲ್ಲಿ 81,790 ಸಾವಿರ ಕೋಟಿ ಅನುದಾನವನ್ನು ರಾಜ್ಯಕ್ಕೆ ನೀಡಿತ್ತು. ಎನ್‌ಡಿಎ ಸರ್ಕಾರ ಎರಡು ಅವಧಿಯಲ್ಲಿ ರಾಜ್ಯಕ್ಕೆ 2,95,817 ಕೋಟಿ ಅನುದಾನವನ್ನು ಹಂಚಿಕೆ ಮಾಡಿದೆ. ಯುಪಿಎ, ಎನ್‌ಡಿಎ ಗೆ ಹೋಲಿಕೆ ಮಾಡಿದರೆ ನಾವು ನೀಡಿರುವುದು ಮೂರು ಪಟ್ಟು ಹೆಚ್ಚಳವಾಗುತ್ತದೆ ಎಂದು ಸಮರ್ಥನೆ ಮಾಡಿಕೊಂಡರು.ಯುಪಿಎ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ 66 ಸಾವಿರ ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. 2024ರ ಒಂದೇ ವರ್ಷದಲ್ಲಿ ಎನ್‌ಡಿಎ ಸರ್ಕಾರ 45,485 ಕೋಟಿ ತೆರಿಗೆ ಹಂಚಿಕೆ ಮಾಡಿದೆ. ಇದೇ ವೇಳೆ ಯುಪಿಎ 60,799 ಕೋಟಿ ನೀಡಿದರೆ, ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ಒಟ್ಟು 2,36,955 ಕೋಟಿ ತೆರಿಗೆ ಹಂಚಿಕೆ ಮಾಡಿದೆ. ಇದು ದಾಖಲೆಗಳಲ್ಲಿರುವ ಅಂಕಿ ಅಂಶಗಳು. ಹಾಗಾದರೆ ಕರ್ನಾಟಕಕ್ಕೆ ಅನ್ಯಾಯವಾಗುವ ಮಾತು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ರೈಲ್ವೆ ಯೋಜನೆಯಡಿ ಕರ್ನಾಟಕಕ್ಕೆ ಯುಪಿಎ ಕೊಟ್ಟಿದ್ದು ಕೇವಲ 834 ಕೋಟಿ ರೂ. ಅನುದಾನ. ಈ ಅವಧಿಯಲ್ಲೇ ನಾವು ರಾಜ್ಯಕ್ಕೆ ವಿವಿಧ ರೈಲ್ವೆ ಯೋಜನೆಗಳಿಗೆ ಒಟ್ಟು 7,559 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದೇವೆ. 640 ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ, 2 ವಂದೇ ಭಾರತ್‌ ರೈಲುಗಳ ಚಾಲನೆ, ತುಮಕೂರಿನಲ್ಲಿ ಮೊದಲ ಕಾರಿಡಾರ್‌ಗೆ ಪ್ರಧಾನಿ ಚಾಲನೆ, ರಾಜ್ಯದ 7 ನಗರಗಳನ್ನು ಸಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!