ಉದಯವಾಹಿನಿ, ಕೋಲಾರ: ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳಿಗೆ ಸಂಸ್ಕಾರ,ಶಿಸ್ತು, ಬದುಕು ಕಲಿಸುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಅವರನ್ನು ದೇಶದ ಆಸ್ತಿಯಾಗಿಸಿ ಎಂದು ಪೋಷಕರಿಗೆ ಸೂಲೂರು ಗ್ರಾ.ಪಂ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷಪೆಮ್ಮಶೆಟ್ಟಿಹಳ್ಳಿ ಸುರೇಶ್ ಕರೆ ನೀಡಿದರು.
ತಾಲ್ಲೂಕಿನ ಚುಂಚುದೇನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ತಾವೇ ಕೊಡುಗೆಯಾಗಿ ನೀಡಿರುವ ಟ್ರ್ಯಾಕ್ ಸೂಟ್ ವಿತರಿಸಿ, ಸರ್ಕಾರದ ಸೌಲಭ್ಯಗಳ ಸದುಪಯೋಗಕ್ಕೆ ಮನವಿ ಮಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸೂಲೂರು ಗ್ರಾಮ ಪಂಚಾಯಿತಿ ಕಂಕಣಬದ್ದವಾಗಿದೆ, ಐದು ಶಾಲೆಗಳಿಗೆ ಮುಂಭಾಗ ಶೀಟ್ ಅಳವಡಿಕೆ ಮಾಡಿಕೊಟ್ಟಿದ್ದೇವೆ, ನಾಲ್ಕಾರು ಶಾಲೆಗಳಿಗೆ ಯುಪಿಎಸ್ ಸೌಲಭ್ಯ ಒದಗಿಸಿದ್ದೇವೆ, ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯ ನೀಡುತ್ತಿರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿಯ ಆದಾಯ ಕ್ರೋಢೀಕರಣಕ್ಕೆ ತಮ್ಮ ಪ್ರಯತ್ನ ಮುಂದುವರೆದಿದ್ದು, ಶಾಲೆಗಳ ಅಭಿವೃದ್ದಿ,ಸಣ್ಣಪುಟ್ಟ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಯಲ್ಲೇ ಮೊದಲಬಾರಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ವಾಹನ ಸೌಲಭ್ಯ ಒದಗಿಸಿರುವುದಾಗಿ ತಿಳಿಸಿದರು.
ಸೂಲೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಕಾರ್ಯಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್‌ಸಿ ಅನಿಲ್ ಕುಮಾರ್ ಅವರು ಹೆಚ್ಚಿನ ಸಹಕಾರ ನೀಡಿದ್ದಾರೆ, ಅವರ ನೆರವಿನಿಂದಲೇ ಶಾಲೆಗಳ ಅಭಿವೃದ್ದಿಗೆ ಒತ್ತು ನೀಡಲು ಸಹಕಾರಿಯಾಗಿದೆ ಎಂದು ಧನ್ಯವಾದ ಸಲ್ಲಿಸಿದರು. ಸಮಾನ ಶಿಕ್ಷಣದ ಪರಿಕಲ್ಪನೆಯೊಂದಿಗೆ ಬಡವರ ಕನಸಿನ ದೇಗುಲಗಳಾದ ಸರ್ಕಾರಿ ಶಾಲೆಗಳನ್ನು ಉಳಿಸಲು ಕಠಿಣ ಕಾನೂನು ಅಗತ್ಯವಿದೆ, ಶಾಸಕ,ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದುವಂತಾದರೆ ತಾನಾಗಿಯೇ ಈ ಶಾಲೆಗಳ ಅಭಿವೃದ್ದಿ, ಗುಣಮಟ್ಟದ ಶಿಕ್ಷಣ ನೀಡಿಕೆಗೆ ವೇಗ ಸಿಗುತ್ತದೆ ಎಂದರು.
ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡರೆ ಶಾಲೆಗಳನ್ನು ನಂದನವನದ ರೀತಿ ಅಭಿವೃದ್ದಿಗೊಳಿಸಬಹುದು ಎಂದ ಅವರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಶಾಲೆಗೆ ಸೇರಿದ ಆವರಣವನ್ನು ಸಮತಟ್ಟು ಮಾಡಿ ಕಾಂಪೌಂಡ್ ಹಾಕಿಸಿಕೊಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!