ಉದಯವಾಹಿನಿ, ಚಾಮರಾಜನಗರ: ನಗರ, ಪಟ್ಟಣ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಒಳ ಚರಂಡಿ, ಕುಡಿಯುವ ನೀರು, ಬೀದಿ ದೀಪ, ಶುಚಿತ್ವ ಕಾಪಾಡುವುದು ಆಯಾ ಸ್ಥಳೀಯ ಸಂಸ್ಥೆಗಳ ಬಹುಮುಖ್ಯವಾದ ಜವಾಬ್ದಾರಿ. ಆದರೆ, ಜಿಲ್ಲೆಯಲ್ಲಿ ಸ್ಥಳೀಯ ಆಡಳಿತಗಳು ಹೊಣೆಗಾರಿಕೆ ಮರೆತ ಪರಿಣಾಮ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.
ಚಾಮರಾಜನಗರ ಸ್ವತಂತ್ರ ಜಿಲ್ಲೆಯಾಗಿ ರೂಪುಗೊಂಡು ಬರೋಬ್ಬರಿ ಎರಡೂವರೆ ದಶಕಗಳು ಕಳೆದರೂ ಸಮರ್ಪಕವಾದ ಬೀದಿದೀಪಗಳ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
‘ಕತ್ತಲಿನಲ್ಲಿ ನಗರ’:ಜಿಲ್ಲೆಗೆ ಮಾದರಿಯಾಗಬೇಕಾಗಿದ್ದ ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಬೀದಿದೀಪಗಳ ಸಮಸ್ಯೆ ಗಂಭೀರವಾಗಿದೆ. ರಾತ್ರಿಯ ಹೊತ್ತು ಹೊರ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಂದ ಚಾಮರಾಜನಗರ ಪ್ರವೇಶಿಸುವ ವಾಹನಗಳಿಗೆ ‘ಕಗ್ಗತ್ತಲಿನ’ ಸ್ವಾಗತ ಸಿಗುತ್ತದೆ. ವಾಹನ ಸವಾರರಿಗೆ ‘ನಗರ’ ಪ್ರವೇಶಿಸಿದ್ದೇವೋ ಅಥವಾ ‘ಅರಣ್ಯ’ ಹಾದಿ ಹಿಡಿದಿದ್ದೇವೋ ಎಂಬ ಗೊಂದಲ ಅರೆಕ್ಷಣ ಕಾಡದಿರದು. ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿ ಬೀದಿ ದೀಪಗಳನ್ನೇ ಕಂಡಿಲ್ಲ !
ಭಾರಿ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಕಗ್ಗತ್ತಲು ಕವಿಯುತ್ತದೆ. ಪ್ರತಿದಿನ ಸಾವಿರಾರು ಸರಕು ಸಾಗಣೆ ವಾಹನಗಳು, ಬಸ್‌ಗಳು, ಪ್ರಯಾಣಿಕ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿದ್ದು ಸವಾರರು ಜೀವ ಕೈಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಹೆದ್ದಾರಿಯಲ್ಲಿ ಎದರು ಬದುರಾಗಿ ವೇಗವಾಗಿ ಬರುವ ವಾಹನಗಳು ಹೊರಸೂಸುವ ಪ್ರಖರ ಬೆಳಕಿನಿಂದ ಚಾಲಕರು ಗೊಂದಲಕ್ಕೆ ಸಿಲುಕುತ್ತಿದ್ದು ವಾಹನಗಳು ಡಿವೈಡರ್‌ಗಳಿಗೆ ಡಿಕ್ಕಿ ಹೊಡೆಯುತ್ತಿರುವ, ಚಾಲಕರ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿರುವ ಘಟನೆಗಳು ನಡೆಯುತ್ತಿವೆ.
ಬೈಕ್ ಸವಾರರ ಪಾಡಂತೂ ಹೇಳತೀರದು. ವಾಹನಗಳ ಪ್ರಖರ ಬೆಳಕಿನಿಂದ ಕಣ್ಣು ಮಂಜಾಗಿ ಹೆದ್ದಾರಿಯಲ್ಲಿರುವ ದೈತ್ಯ ಗುಂಡಿಗಳಿಗೆ ವಾಹನಗಳನ್ನು ಇಳಿಸಿ ಗಂಭೀರವಾದ ಪೆಟ್ಟು ಮಾಡಿಕೊಂಡಿದ್ದಾರೆ. ನಗರಸಭೆ ವ್ಯಾಪ್ತಿಗೊಳಪಡುವ ಸುಲ್ತಾನ್ ಷರೀಫ್ ರಸ್ತೆಯಿಂದ ಸೋಮವಾರ ಪೇಟೆಯವರೆಗೂ ಬೀದಿದೀಪಗಳಿಲ್ಲದೆ ಕತ್ತಲಿನಲ್ಲಿಯೇ ಸಂಚರಿಸಬೇಕಾಗಿದೆ.
