ಉದಯವಾಹಿನಿ, ಬೆಂಗಳೂರು: ಕೊಡಗು, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಅತ್ತ ಉತ್ತರಕರ್ನಾಟಕದಲ್ಲಿ ಮಳೆಯ ಪ್ರಮಾಣ ತಗ್ಗಿದ್ದರೂ ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದರಿಂದ ಕೃಷ್ಣಾ, ಉಪನದಿಗಳ ಮಟ್ಟ ಏರಿಕೆಯಾಗಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಗಡಿನಾಡುಗಳಲ್ಲಿ ಹಳ್ಳಿಗಳು ಜಲಾವೃತವಾಗಿ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಸುರಿದ ಭಾರಿ ಮಳೆಗೆ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಬಾಗಮಂಡಲ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಗೆ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯ ಮುಂಬಾಗಿಲ ಮೆಟ್ಟಿಲವರೆಗೆ ನೀರು ಆವರಿಸಿದೆ.
ಅತ್ತ ಮಲೆನಾಡಿನಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಭಾರಿ ಮಳೆಯಿಂದ ಚಾರ್ಮುಡಿ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗುರುಳಿ ಚಿಕ್ಕಮಗಳೂರಿನ ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿ ಕೊಟ್ಟಿಗೆಹಾರ ಸಮೀಪ ಟ್ರಾಫಿಕ್ ಜಾಮ್ ಆಗಿತ್ತು. ವಾಹನಗಳನ್ನು ನಿಲ್ಲಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಸಕಲೇಶಪುರ ಸಮೀಪ ಶಿರಾಡಿಘಾಟ್ ರಸ್ತೆಯ ದೊಡ್ಡತಪ್ಪಲೆ ಬಳಿ ಭೂ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ಸುರಿದ ಭಾರಿ ಮಳೆಯಿಂದ ರಸ್ತೆ ಪಕ್ಕದಲ್ಲಿ ಹಾದುಹೋಗಿರುವ ಎತ್ತಿನಹೊಳೆ ಪೈಪ್‌ಲೈನ್ ಸಮೀಪ ಭೂಮಿ ಕುಸಿದು ಬಾರ್ಲಿ- ಮಲ್ಲಗದ್ದೆ-ಕಾಡುಮನೆ ಸೇರಿದಂತೆ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದೆ. ಕಾವೇರಿ ಜಲಾಶಯಗಳೀಂದ ನದಿಗೆ ನೀರು ಬಿಡುತ್ತಿರುವ ಹೊರಹರಿವಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ 9 ಗ್ರಾಮಗಳು ಪಾರಾಗಿವೆ. ಕಾವೇರಿ ನದಿಪಾತ್ರದ ಕೊಳ್ಳೆಗಾಲ ತಾಲ್ಲೂಕಿನ ದಾಸಪುರ, ಮಳ್ಳೂರು, ಹಳೆ ಅನ್ನಗಳ್ಳಿ, ಹಳೆ ಹಂಪಾಪುರ, ಅರಳೆ ಗ್ರಾಮದ ಪ್ರದೇಶಗಳಲ್ಲಿ ಪ್ರವಾಹ ನೀರಿನ ಪ್ರಮಾಣ ಕಡಿಮೆಯಾಗಿದೆ.
